×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಶಿಕ್ಷಣ ವ್ಯವಸ್ಥೆಯ ಕುರಿತು ಚಿಂತನೆ ಅನಿವಾರ್ಯ

ನಾಲಂದ ಕಾಲೇಜು ವಿವೇಕಾನಂದ ಜಯಂತಿ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಡಾ.ವಿಘ್ನೇಶ್ವರ ವರ್ಮುಡಿ ಅಭಿಮತ

ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣ ಮತ್ತು ಯುವಕರ ಬಗ್ಗೆ ತಮ್ಮದೇ ಆದ ವಿಶಿಷ್ಟ ನಿಲುವು ಹೊಂದಿದ್ದರು. ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ;ಚಾರಿತ್ರ್ಯ ನಿರ್ಮಾಣದಿಂದ ರಾಷ್ಟ್ರನಿರ್ಮಾಣ’ ಎಂದು ಪ್ರತಿಪಾದಿಸಿ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಅವರು ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದ್ದರು ಎಂದು ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ಹೇಳಿದರು.

ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಶನಿವಾರ ವಿವೇಕಾನಂದ ಜಯಂತಿ ಆಚರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Vivekananda-Jayanthi2

Vivekananda-Jayanthi1

ಪ್ರತಿಯೊಬ್ಬ ವಿದ್ಯಾರ್ಥಿಯ ಆತ್ಮದಲ್ಲೂ ಜ್ಞಾನದ ಭಂಡಾರವಿದೆ.ಇದನ್ನು ಹೊರಗೆಡಹಲು ಉತ್ತಮ ಶಿಕ್ಷಕನ ಅಗತ್ಯವಿದೆ.ದೇಶದ ಯುವ ಜನಾಂಗವನ್ನು ನೇರ ದಾರಿಯಲ್ಲಿ ಮುನ್ನಡೆಸಲು ಆಧ್ಯಾತ್ಮಿಕ ಆಧಾರದ ಶಿಕ್ಷಣ ವ್ಯವಸ್ಥೆ ಅಗತ್ಯ ಎಂಬುದನ್ನು ಸ್ವಾಮಿ ವಿವೇಕಾನಂದರು ಮನಗಂಡಿದ್ದರು.ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸುವ ವ್ಯವಸ್ಥೆ ಅಗತ್ಯವಿದ್ದು ಉತ್ತಮ ಶಿಕ್ಷಣ ನೀಡಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಎಂಬುದು ವಿವೇಕಾನಂದರ ನಿಲುವಾಗಿತ್ತು.

ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ, ಉತ್ತಮ ಸಂಸ್ಕೃತಿ, ಏಕಾಗ್ರತೆಗಾಗಿ ಬ್ರಹ್ಮಚರ್ಯ, ಜೀವನ ನಡೆಸಲು ಬೇಕಾದ ತರಬೇತಿ ಇತ್ಯಾದಿ ಅಂಶಗಳ ಅಳವಡಿಕೆ ಶಿಕ್ಷಣ ವ್ಯವಸ್ಥೆಯಲ್ಲಿ ಅನಿವಾರ್ಯ.ಆದರೆ ಈ ಬಗ್ಗೆ ಕಾಳಜಿ ವಹಿಸದ ಕಾರಣ ವಿದ್ಯಾರ್ಥಿ ಸಮೂಹ ಕೇವಲ ಆರ್ಥಿಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಿದೆ.ಪೋಷಕರು, ಶಿಕ್ಷಕರು, ಚಿಂತಕರು ಮತ್ತು ನೀತಿ ನಿರೂಪಕರು ಈ ವಿಚಾರದಲ್ಲಿ ಚಿಂತನ ಮಂಥನ ಮಾಡುವ ಅನಿವಾರ್ಯತೆಯಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾಲೇಜು ಯೂನಿಯನ್ ಅಧ್ಯಕ್ಷೆ ನಯನಶ್ರೀ ಕೆ. ಮಾತನಾಡಿ, ವಿವೇಕಾನಂದರ ಅಧ್ಯಾತ್ಮಿಕ ಸಾಧನೆ, ಯುವಕರಿಗೆ ನೀಡಿದ ಸಂದೇಶ, ಆದರ್ಶಗಳು ಸಾರ್ವಕಾಲಿಕವಾಗಿದ್ದು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.

ಪೆರ್ಲ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ. ಯೂನಿಯನ್ ಕಾರ್ಯದರ್ಶಿ ವಿಷ್ಣು ಪ್ರಸಾದ್ ಟಿ. ಮತ್ತಿತರರು ಉಪಸ್ಥಿತರಿದ್ದರು.

ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಮುಖ್ಯಸ್ಥೆ ಮಧುರವಾಣಿ ಸ್ವಾಗತಿಸಿ, ಉಪನ್ಯಾಸಕ ಶ್ರೀನಿಧಿ ವಂದಿಸಿದರು.ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ ಕ್ರಾಸ್ತ ನಿರೂಪಿಸಿದರು.