ಶಾಂತಿ, ತ್ಯಾಗ, ಸಹಿಷ್ಣತೆ, ಸ್ವಾವಲಂಬನೆ ಅಹಿಂಸೆ ಮೊದಲಾದ ತತ್ತ್ವಗಳನ್ನು ಜಗತ್ತಿಗೆ ಸಾರಿದವರು ಮಹಾತ್ಮಾಗಾಂಧೀಜಿ ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಮೋದ್ ಎಂ.ಜಿ. ನುಡಿದರು.
ಅವರು ಪೆರ್ಲ ನಾಲಂದ ಕಾಲೇಜಿನ ಎನ್.ಎಸ್.ಎಸ್ ವತಿಯಲ್ಲಿ ನಡೆದ ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಇಂದಿನ ಮಾನವನ ಯಾಂತ್ರಿಕ ಬದುಕಿನಲ್ಲಿ ಗಾಂಧೀಜಿಯ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಅರ್ಥ ಕೆಡುತ್ತಿವೆ. ಈ ಸಂದರ್ಭದಲ್ಲಿ ಅದರ ಜಾಗೃತಿಗಾಗಿ ಗಾಂಧೀಜಿಯವರನ್ನು ಮತ್ತೆ ಮತ್ತೆ ನೆನಪಿಸುವುದು ಅತೀ ಅಗತ್ಯ. ನಾಡಿನಲ್ಲಿ ಹಿಂಸೆ, ಅತ್ಯಾಚಾರ, ದೊಂಬಿ, ಗಲಬೆಗಳು ಹೆಚ್ಚುತ್ತಿರುವಾಗ ಜನರಿಗೆ ಸತ್ಯದ ಆಗ್ರಹಕ್ಕಾಗಿ ಸತ್ಯಾಗ್ರಹ, ಪ್ರತಿಭಟನೆಗಳು ಹೇಗಿರಬೇಕು ಎಂಬುದನ್ನು ಗಾಂಧೀಜಿ ತೋರಿಸಿ ಕೊಟ್ಟಿದ್ದಾರೆ. ಅಂತಹಾ ಸಹಿಷ್ಣುತೆಯಿಂದ, ಪ್ರೀತಿ ತತ್ತ್ವದಿಂದ ಮೆರೆವ ಪ್ರತಿಭಟನೆಗಳಿಂದ ಎಲ್ಲವನ್ನೂ ಸಾಧಿಸಬಹುದು. ಗಾಂಧೀಜಿಯ ಸ್ವರಾಜ್ಯದ ಮತ್ತು ರಾಮ ರಾಜ್ಯದ ಕನಸನ್ನು ನನಸಾಗಿಸಬೇಕಾದರೆ ನಾವು ಸ್ವಾವಲಂಬಿಗಳಾಗಬೇಕು, ಕ್ರೌರ್ಯವನ್ನು ಬಿಟ್ಟು ಮಾನವರಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆವಹಿಸಿ ಮಾತನಾಡುತ್ತ ಇಂದು ಜಪಾನ್, ಚೀನಾ ಮೊದಲಾದ ದೇಶಗಳು ಗಾಂಧೀಜಿಯವರ ಗುಡಿಕೈಗಾರಿಕೆಯ ಚಿಂತನೆಯನ್ನು ಕಾರ್ಯಗತಗೊಳಿಸಿದ ಕಾರಣ ಜಗತ್ತಿನ ಇತರ ದೇಶಗಳ ಮುಂದೆ ತಲೆ ಎತ್ತಿ ನಿಲ್ಲುವಂತಾದುದು. ಆದುದರಿಂದ ಇನ್ನಾದರೂ ನಾವು ಸ್ವಾವಲಂಬಿಯಾಗಿ ಬದುಕುವ ದಾರಿಗಳನ್ನು ಕಂಡುಕೊಂಡರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್‌ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿ ಉಪನ್ಯಾಸಕ ಸುರೇಶ್ ವಂದಿಸಿದರು. ವಿದ್ಯಾರ್ಥಿನಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕ, ಉಪನ್ಯಾಸಕೇತರ ಸಿಬಂಧಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು.