ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವವನೇ ಗುರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಭೋಧನ್ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು. ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಅಧ್ಯಾಪಕರ ದಿನದಂದು ’ಗುರು ನಮನ- ಒಂದು ಚಿಂತನೆ’ ಎಂಬ ವಿಷಯದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಅರ್ಪಣಾ ಮನೋಭಾವ ತೋರುವ ತಾಯಿ, ತಂದೆ ಮತ್ತು ಗುರುಗಳನ್ನು ದೇವರಾಗಿ ಕಾಣುವ, ಗೌರವಿಸುವ ಸಂಸ್ಕೃತಿ ಭಾರತೀಯ ಸಂಸ್ಕೃತಿ. ವಿವೇಕಾನಂದರಂತಹಾ ಮಹಾಮಾನವರನ್ನು, ಪರಮಹಂಸರಂತಹ ದೇವಮಾನವರನ್ನು ಪಡೆದ ನಾಡು ಭಾರತ. ನಾವು ಅವರ ತತ್ತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಒಬ್ಬ ಗುರುವಿಗೆ ಉತ್ತಮ ಮಾನವರನ್ನು ಮತ್ತು ಮಹಾಮಾನವರನ್ನು ಸೃಷ್ಟಿಸಲು ಸಾಧ್ಯ. ಎಂದು ಗುರುವಿನ ಮಹತ್ವವನ್ನು ತಿಳಿಸಿದರು.
ತಮ್ಮನ್ನು ಸಮಾಜಕ್ಕಾಗಿ ಅರ್ಪಿಸಿಕೊಂಡ ಶಿಕ್ಷಕರಲ್ಲಿ ಕೆಲವರನ್ನು ಆಯ್ದುಕೊಂಡು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಯಾಗಲಿ ಭಾರತೀಯ ಸಂಸ್ಕೃತಿ ಬೆಳೆಯಲಿ ಎಂಬ ಉದ್ದೇಶದಿಂದ ಗುರುವರ್ಯರಾದ ನಿವೃತ್ತ ಪ್ರಾಚಾರ್ಯ, ಚಿಂತಕ ಹಾಗೂ ಸಾಹಿತಿ ಶ್ರೀ ಮಾ.ಭ ಪೆರ್ಲ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ತಲೆಂಗಳ ನಾರಾಯಣ ಭಟ್, ನಿವೃತ್ತ ಶಿಕ್ಷಕಿ.ಶ್ರೀಮತಿ ಪ್ರಭಾವತಿ ನಾರಾಯಣ ಭಟ್, ನಿವೃತ್ತ ಮುಖ್ಯ ಶಿಕ್ಷಕ ಶ್ರೀ ರಾಮಣ್ಣ ಪೂಜಾರಿ, ನಿವೃತ್ತ ಶಿಕ್ಷಕ ಶ್ರೀ ನೆಲ್ಲಿಕುಂಜೆ ಸುಬ್ಬರಾವ್, ನಿವೃತ್ತ ಶಿಕ್ಷಕಿ ಶ್ರೀಮತಿ ವಸಂತಿ ಅಗಲ್ಪಾಡಿ ಇವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ಮತ್ತು ಫಲ ತಾಂಬೂಲವನ್ನಿತ್ತು ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ಗೌರವಿಸಿದರು.
ಗೌರವಾರ್ಪಣೆಯನ್ನು ಸ್ವೀಕರಿಸಿದ ಮಾ.ಭ ಪೆರ್ಲ ಮಾತನಾಡುತ್ತ ಗುರುವಾದವನು ಶಿಕ್ಷಣದ ಮೂಲಕ ಅಂತರಂಗವನ್ನು ಅರಳಿಸುವ ಕಾರ್ಯವನ್ನು ಮಾಡುತ್ತಾನೆ. ಆದರೆ ಇಂದು ಆಂತರಂಗಿಕ ಶಿಕ್ಷಣಕ್ಕಿಂತ ಬಾಹ್ಯಶಿಕ್ಷಣಕ್ಕೆ ಪ್ರಧಾನ ಸ್ಥಾನ ಬಂದುದರಿಂದ ಭಾರತೀಯ ಸಂಸ್ಕೃತಿ ನಶಿಸಲು ಪ್ರಾರಂಭವಾಗಿದೆ. ಅಧ್ಯಾಪಕರಿಗಿರುವ ಗೌರವ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಇಂದಿನ ಶಿಕ್ಷಣ ಪದ್ದತಿ ಎಂದು ವಿಷಾದ ವ್ಯಕ್ತಪಡಿಸಿದರು. ಗುರುವನ್ನು ಗೌರವಿಸುವ ಇಂತಹ ಕಾರ್ಯ ಎಲ್ಲಾ ಕಡೆ ನಡೆದಾಗ ಇಂದಿನ ವಿದ್ಯಾರ್ಥಿಗಳು ಗುರುವಿನ ಮಹತ್ವವನ್ನು ಅರಿತುಕೊಳ್ಳತ್ತಾರೆ. ಉತ್ತಮ ಮಾನವರ ನಿರ್ಮಾಣವಾಗುತ್ತದೆ. ಭಾರತ ವಿಶ್ವಗುರುವಾಗುತ್ತದೆ. ಎಂದು ನುಡಿದರು. ಶ್ರೀ ತಲೆಂಗಳ ನಾರಾಯಣ ಭಟ್ ಮತ್ತು ವಸಂತಿ ಟೀಚರ್ ರವರು ಗೌರವಾರ್ಪಣೆ ಸ್ವೀಕರಿಸಿ ಸಂತೋಷವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿ ಶ್ರೀ ಗೋಪಾಲ ಚೆಟ್ಟಿಯಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡುತ್ತ ಆಧುನಿಕ ಯುಗದಲ್ಲಿ ಗುರುವಂದನೆಯ ಪ್ರಸ್ತುತತೆಯನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಕ್ಷಕರನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸ್ಟಾಫ್ ಕಾರ್ಯದರ್ಶಿ ಕೆ.ಕೇಶವಶರ್ಮ ವಂದಿಸಿದರು. ಊರ ನಿವೃತ್ತ ಶಿಕ್ಷಕ, ಶಿಕ್ಷಕಿಯರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು. ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ಊರ ಅಭಿಮಾನಿಗಳು ಹಿತೈಶಿಗಳು ಉಪನ್ಯಾಸಕ, ಉಪನ್ಯಾಸಕಿಯರು ಬೋಧಕೇತರ ನೌಕರರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು.