ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾಷಾ ಕೌಶಲ್ಯ, ಬೌದ್ಧಿಕತೆಗಳನ್ನು ಬೆಳೆಸಿಕೊಂಡರೆ ಮಾತ್ರ ಬದುಕಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಸಾಧ್ಯ ಎಂದು ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗದ ಉಪನ್ಯಾಸಕ ಪ್ರೊ. ರಾಕೇಶ್ರವರು ನುಡಿದರು. ಅವರು ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿಯ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಪ್ರಾಮಾಣಿಕತೆ, ಪರಿಶ್ರಮಗಳು ಮಾನವನ ಗುರಿ ಸಾಧನೆಯ ಮಾರ್ಗಗಳು ಈಸಬೇಕು ಇದ್ದು ಜಯಿಸಬೇಕು ಎಂಬ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಜೀವನದಲ್ಲಿ ಮಹೋನ್ನತಿಯನ್ನು ಪಡೆದ ಸಾಧಕರಾಗಬಹುದು. ಅಂತಹ ವ್ಯಕ್ತಿಗಳಿಗೆ ಇಂದು ಸಾಕಷ್ಟು ಅವಕಾಶಗಳು ಕಾದಿರುತ್ತವೆ. ನಮ್ಮಲ್ಲಿ ಕೀಳರಿಮೆಗಳಾಗಲೀ, ಮೇಲರಿಮೆಯಾಗಲೀ ಇರಬಾರದು ಅದು ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ನಿರ್ವಹಿಸಿದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಲ್ಯಾಬ್ ಇನ್ಸ್ಟ್ರಕ್ಟರ್ ಅನಿಲ್ ಕುಮಾರ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್. ಪಿ ಸ್ವಾಗತಿಸಿ, ಶ್ರೀನಿಧಿ ವಂದಿಸಿದರು.