ಮಾನವನು ಜೀವನದಲ್ಲಿ ಗುರಿಯನ್ನು ಸಾಧಿಸಿ ಮಹೋನ್ನತಿಯನ್ನು ಪಡೆಯಬೇಕಾದರೆ ಶಿಕ್ಷಣ ಅತೀ ಅಗತ್ಯ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಸರಸ್ವತಿಯವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವೃತ್ತಿ ಮಾರ್ಗದರ್ಶನದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಪ್ರಸ್ತುತ ಸಮಾಜದಲ್ಲಿ ಉತ್ತಮ ಸ್ಥಾನ, ಮಾನ, ಗೌರವಗಳು ಲಭಿಸಬೇಕಾದರೆ ಸ್ನಾತಕೋತ್ತರ ಶಿಕ್ಷಣಗಳನ್ನು ಹೊಂದಿರಬೇಕು. ಇಂದಿನ ಸ್ಷರ್ಧಾತ್ಮಕ ಬದುಕಿನಲ್ಲಿ ಪ್ರತಿಕ್ಷಣವೂ ಹೊಸತನ್ನು ಕಲಿಯುತ್ತ ಕಾಲಕ್ಕೆ ತಕ್ಕಂತೆ ಬೌದ್ಧಿಕತೆಯನ್ನು ಬೆಳೆಸುತ್ತ ಹೋಗಬೇಕು. ನಾವು ನಿಂತ ನೀರಿನಂತಿರದೆ ಹರಿಯುತ್ತಿರಬೇಕು. ನಮ್ಮನ್ನು ಸದಾ ಒಂದಲ್ಲೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರಬೇಕು ಎಂದರು.
ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನನ್ಯಾರವರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಸುರೇಶ್ ಕುಂಟಿಕಾನ ಸ್ವಾಗತಿಸಿ ವಿದ್ಯಾರ್ಥಿನಿ ರೂಪಲಕ್ಷ್ಮಿ ವಂದಿಸಿದರು.