ವಿದ್ಯಾರ್ಥಿಗಳಲ್ಲಿ ತಾಳ್ಮೆ, ಏಕಾಗ್ರತೆಗಳಿದ್ದಾಗ ಮಾತ್ರ ನೆನಪಿನ ಶಕ್ತಿ ಹೆಚ್ಚುವುದು ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕೌನ್ಸಿಲರ್ ಗಿರೀಶ್‌ರವರು ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಪ್ಲೇಸ್‌ಮೆಂಟ್‌ಸೆಲ್‌ನ ವತಿಯಲ್ಲಿ ’ಪರೀಕ್ಷಾ ತಯಾರಿ ಮತ್ತು ನೆನಪಿನ ಶಕ್ತಿ’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ನಮ್ಮಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ, ಅದನ್ನು ನಾವು ಅರಿತಿರುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಸದಾ ಧನಾತ್ಮಕ ಚಿಂತನೆಯನ್ನು ಮಾಡುತ್ತ ಸಾಗಿದರೆ ಎಲ್ಲ ಕಡೆಗಳಲ್ಲಿ ಗೆಲ್ಲುತ್ತೇವೆ, ನಮ್ಮಲ್ಲಿ ಋಣಾತ್ಮಕ ಚಿಂತನೆಗಳು ಬಂದಾಗ ಸೋಲುತ್ತೇವೆ ಎಂದರು. ಇದರ ಜೊತೆಗೆ ಹಿತಮಿತವಾದ ಸಾತ್ವಿಕ ಆಹಾರವನ್ನು ಸೇವಿಸಿದರೆ ಮನಸ್ಸು ಲವಲವಿಕೆಯಿಂದಿರುತ್ತದೆ. ನೋಡಿ, ಕೇಳಿ, ಆಡಿ ಕಲಿತುಕೊಳ್ಳುವುದು ಮನಸ್ಸಿನಲ್ಲಿ ಗಟ್ಟಿಯಾಗಿರುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಆರೋಗ್ಯ ಕಾಯ್ದುಕೊಳ್ಳುವುದು ಅತೀ ಅಗತ್ಯ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆಯನ್ನು ವಹಿಸಿದರು. ಉಪನ್ಯಾಸಕ ಸುರೇಶ್ ಕುಂಟಿಕಾನರವರು ಸ್ವಾಗತಿಸಿ, ವಿದ್ಯಾರ್ಥಿನಿ ಅನುಷ ಪ್ರಾರ್ಥಿಸಿ, ವಿದ್ಯಾರ್ಥಿ ಅಭಿಲಾಷ್ ವಂದಿಸಿದರು.