ಮಾನವ ನಿಜವಾದ ಮನುಷ್ಯನಾಗುವುದು ಸಮಾಜ ಸೇವೆಯಿಂದ. ಒಬ್ಬ ವ್ಯಕ್ತಿ ಸಮರ್ಥನಾಗಿ ಬೆಳೆಯ ಬೇಕಾದರೆ ಸಮಾಜದಿಂದ ಸಾಕಷ್ಟು ಪಡೆದು ಕೊಳ್ಳುತ್ತಾನೆ. ಅದೇ ರೀತಿ ತನ್ನನ್ನು ಗುರುತಿಸಿಕೊಳ್ಳಬೇಕಾದರೆ ಸಮಾಜಕ್ಕೆ ಅರ್ಪಿಸಿಕೊಳ್ಳಬೇಕು. ನಾವು ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿ ಜೀವನದಲ್ಲಿ ಉಳಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುವುದು. ಆಧುನಿಕ ಯುಗದಲ್ಲಿ ಮಾನವ ಯಾಂತ್ರಿಕನಾಗುತ್ತಾ ಸ್ವಾರ್ಥಿಯಾಗುತ್ತಿದ್ದಾನೆ. ಮಾನವೀಯತೆ, ಬಂಧುತ್ವಗಳ ಅರ್ಥ ಕ್ಷೀಣಿಸುತ್ತಿದೆ. ಅಂತಹಾ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಮರ್ಪಣಾ ಭಾವ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಅಗತ್ಯ. ಪಾಠದ ಜೊತೆಗೆ ಸಾಧ್ಯವಾದಷ್ಟು ಸಮಾಜಸೇವೆ ಮಾಡಿ ಜೀವನ ಸಾರ್ಥಕಗೊಳಿಸೋಣ ಎಂದು ಎನ್.ಎಸ್.ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರೊಫೆಸರ್ ಎ.ಶ್ರೀನಾಥರು ಪೆರ್ಲ ನಾಲಂದಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ನ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ರವರು ಮಾತನಾಡುತ್ತಾ ಮರ, ಗಿಡ, ಪ್ರಾಣಿ, ಪಕ್ಷಿಗಳು ಹೇಗೆ ಪರರಿಗಾಗಿ ಜೀವಿಸುತ್ತವೋ ಹಾಗೆಯೇ ಬುಧ್ಧಿವಂತನಾದ ಮಾನವನೂ ತನ್ನ ದೇಹವನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು ಎಂದರು. ಸ್ಟಾಫ್ ಕಾರ್ಯದರ್ಶಿ ಕೆ.ಕೇಶವ ಶರ್ಮ ಶುಭ ಹಾರೈಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಪಿ. ಶಂಕರನಾರಾಯಣ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಉಪನ್ಯಾಸಕ ಶಂಕರ ಖಂಡಿಗೆ ಸ್ವಾಗತಿಸಿ ವಿದ್ಯಾರ್ಥಿನಿ ನಯನ ವಂದಿಸಿದರು ವಿದ್ಯಾರ್ಥಿ ವಿಕಾಸ್ ನಿರೂಪಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.