ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಭೂಮಿತ್ರಾ ಸೇನಾ ಘಟಕದ ವತಿಯಿಂದ ವಿಶ್ವಪ್ರಕೃತಿ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂಮಿತ್ರಾ ಸೇನಾ ಘಟಕದ ಅಧ್ಯಕ್ಷೆ ಕುಮಾರಿ ಭವ್ಯಶ್ರಿ ವಹಿಸಿ ಉತ್ತಮ ಜೀವನ ನಡೆಸಲು ಪ್ರಕೃತಿ ಸಂರಕ್ಷಣೆ ಅತ್ಯಗತ್ಯ ಎಂದರು. ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ ಮಾತನಾಡಿ ಜೀವಜೈವದ ಉಳಿವಿಗಾಗಿ ಪ್ರಕೃತಿ ಸಂರಕ್ಷಣೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿಯಾಗಿ ಜೀವನ ಮೈಗೂಡಿಸಿಕೊಳ್ಳಬೇಕು. ನಮ್ಮ ಪರಿಸರದಲ್ಲಿ ಸಸ್ಯ ಸಂಪತ್ತನ್ನು ವ್ಯವಸ್ಥಿತ ರೀತಿಯಲ್ಲಿ ಬೆಳೆಸುವುದರಿಂದ ಗಾಳಿ, ಬೆಳಕು, ಆಹಾರ ….ಮೊದಲಾದ ಪ್ರಕೃತಿಯ ಸಂಪನ್ಮೂಲಗಳನ್ನು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಪಡೆಯಬಹುದು, ಪ್ರಕೃತಿ ಸುಂದರವಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ಲಭ್ಯವಾಗುತ್ತದೆ. ಪರಿಸರ ಶುಚಿಯಾಗಿರಿಸುವಿಕೆ,ಪ್ರಕೃತಿಯ ಸಂಪನ್ಮೂಲಗಳ ಸದ್ಭಳಕೆ ಮಾಡಿ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗ ಬೇಕು ಎಂದು ಹೇಳಿದರು.
ಭೂಮಿತ್ರಾ ಸೇನಾ ಘಟಕದ ಸಂಯೋಜಕರಾದ ರಂಜಿತ್ ಕುಮಾರ್ ಬಿ. ಯಸ್ ಪ್ರಕೃತಿಯು ನಮಗೆ ಸಾಕಷ್ಟು ಸಂಪತ್ತನ್ನು ನೀಡುತ್ತದೆ , ಪ್ರಕೃತಿಗೆ ಮಾನವನ ಅಗತ್ಯವನ್ನು ಪೂರೈಸಲು ಸಾಮರ್ಥ್ಯವಿದೆ ಆದರೆ ಮನುಷ್ಯನ ದುರಾಶೆಯನ್ನಲ್ಲ”,ಪ್ರಕೃತಿಯ ಸಂರಕ್ಷಣೆಯ ಬಗ್ಗೆ ವಿವರಿಸಿದರು. ಭೂಮಿತ್ರಾ ಸೇನಾ ಘಟಕದ ಜೊತೆ ಕಾರ್ಯದರ್ಶಿ ಕಾವ್ಯಚಂದ್ರನ್ ಕಾರ್ಯಕ್ರಮವನ್ನು ನಿರೂಪಿಸಿದರು.ಭೂಮಿತ್ರಾ ಸೇನಾ ಘಟಕದ ಕಾರ್ಯದರ್ಶಿ ನಿಶಾಂತ್ ಸ್ವಾಗತಿಸಿ, ಕುಮಾರಿ ಅನುಷಾ ಧನ್ಯವಾದ ಹೇಳಿದರು.