ಜಲಸಾಕ್ಷರತಾ ಅಭಿಯಾನದ ಭಾಗವಾಗಿ ನಿರ್ಮಿಸುತ್ತಿರುವ ಜೀವಜಲ ಕಿರುಚಿತ್ರದ ಚಿತ್ರೀಕರಣ ಕಜಂಪಾಡಿ ಪ್ರದೇಶದಲ್ಲಿರುವ ಸುಬ್ರಹ್ಮಣ್ಯ ಭಟ್ಟರ ತೋಟದಲ್ಲಿರುವ ಜಲಾಶಯದ (ವಿಶಾಲವಾದಕೆರೆ ) ಪರಿಸರದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಭಟ್ಟರತೋಟದಲ್ಲಿರುವ ವಿಶಾಲವಾದಕೆರೆ ಸ್ವಾತಂತ್ರ್ಯಪೂರ್ವದಲ್ಲಿ ಅವರ ಹಿರಿಯರು ನಿರ್ಮಿಸಿದ್ದು . 1958 ರ ನಂತರ ಸುಬ್ರಹ್ಮಣ್ಯ ಭಟ್ ಅವರು ವಿಶಾಲವಾದ ಕೆರೆಯಲ್ಲಿ ನೀರು ತುಂಬಿ ನಿಲ್ಲುವಂತೆ ಪ್ರತಿ ವರ್ಷವು ಕೆರೆಯ ಕೆಲಸಕಾರ್ಯಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಸುತ್ತಾ ಬಂದಿದ್ದಾರೆ. ಸುಮಾರು 15 ಅಡಿ ಆಳ 5000 ಚದರ ಅಡಿ ವಿಸ್ತೀರ್ಣದಲ್ಲಿರುವ ಕೆರೆ ನೀರಿನಿಂದ ತುಂಬಿತುಳುಕುತ್ತಿದೆ. ಪ್ರತೀ ದಿನ ಸುಮಾರು ಒಂದು ಗಂಟೆ ಕೆರೆಯಿಂದ ತೋಟಕ್ಕೆ ನೀರು ಬಿಡುತ್ತಾರೆ. ಏಪ್ರೀಲ್ ತಿಂಗಳ ಕೊನೆಯವರೆಗೂ ಸಾಕಷ್ಟು ನೀರಿದ್ದು, ಮೇ ಆರಂಭದಿಂದಲೇ ನೀರಿನ ಒರತೆ ಕಡಿಮೆಯಾಗುತ್ತಾ ಬರುತ್ತದೆ.
ನೀರಿನ ಮೂಲ ಹಾಗೂ ಕೆರೆ ತಮ್ಮ ಕುಟುಂಬದ ಜೀವನಾಡಿ ಅನ್ನುತ್ತಿರುವ ಸುಬ್ರಹ್ಮಣ್ಯ ಭಟ್ಟರ ಮಾತುಗಳು ಕೃಷಿಯಲ್ಲಿನ ಮಮತೆ, ಪರಿಸರ ಪ್ರೇಮವನ್ನು ಪ್ರತಿಬಿಂಬಿಸುತ್ತದೆ. ನೀರು ಮತ್ತು ತಾಯಿಯ ಬಗ್ಗೆ ವಿಶೇಷ ಪ್ರೀತಿ, ಕಾಳಜಿವಹಿಸಿರುವ ಸುಬ್ರಹ್ಮಣ್ಯ ಭಟ್ಟರ ಮಾತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಸುಬ್ರಹ್ಮಣ್ಯ ಭಟ್ಟರ ಕ್ರಿಯಾತ್ಮಕತೆ ವಿದ್ಯಾರ್ಥಿಗಳನ್ನು ನಿಬ್ಬೆರಗಾಗುವಂತೆ ಮಾಡಿತು.
ಸುರಂಗಗಳಿಂದ ಹರಿದು ಬರುತ್ತೀರುವ ನೀರನ್ನು ಕೆರೆಗಳಲ್ಲಿ ಸಂಗ್ರಹಿಸುವ ಕಲೆಯನ್ನು ರೂಢಿಯಾಗಿಸಿದ ಸುಬ್ರಹ್ಮಣ್ಯ ಭಟ್ಟರ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ವಿಧಾನ ಪದ್ಧತಿ ಕೃಷಿಕರಿಗೊಂದು ಪಾಠ. ಅಡಿಕೆ, ತೆಂಗು, ಬಾಳೆ, ಕರಿಮೆಣಸು ಮುಂತಾದ ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಸಿದ್ದಾರೆ.
ಭೂಮಿಯ ಮೇಲ್ಮೈ ನೀರಿನ ಮೂಲ ಹಾಗೂ ಸಂಗ್ರಹಣೆಯ ವಿವಿಧ ಪ್ರಕಾರಗಳ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿರುವ ಜೀವಜಲ ಕಿರುಚಿತ್ರಕ್ಕೆ ಜಲಾಶಯದ ಪ್ರಕೃತಿರಮಣೀಯ ದೃಶ್ಯಮೆರುಗು ನೀಡಿದೆ. ನೀರಿನ ಸಂಗ್ರಹಣೆಯ ಸಾಂಪ್ರದಾಯಿಕ ಕಲೆಗಳ ಅಧ್ಯಯನ ವಿದ್ಯಾರ್ಥಿಗಳಿಗೆ ಹೊಸ ಅನುಭವ.
ಪಾರಂಪರ್ಯ ವಿಧಾನದಲ್ಲಿನ ನೀರಿನ ಸಂಗ್ರಹಣೆಯು ಭೂಮಿಯ ಜಲಮಟ್ಟ ಕಾಪಾಡುವಲ್ಲಿ ಅಗಾಧ ಪಾತ್ರವಹಿಸುತ್ತದೆ. ತೋಡಿಗೆ ಕಟ್ಟುವ ಕಟ್ಟ, ಕೆರೆ, ಮದಕ,ಮೊದಲಾದ ಪ್ರಕಾರಗಳಲ್ಲಿ ನೀರು ಭೂಮಿಗೆ ಇಂಗುತ್ತದೆ.. ಭತ್ತದ ಬೇಸಾಯ, ಸಾಂಪ್ರದಾಯಿಕ ವಿಧಾನದಲ್ಲಿನ ನೀರಿನ ಸದ್ಭಳಕೆಯಿಂದ ಭೂಮಿ ಸದಾ ಹಚ್ಚಹಸುರಾಗಿರುತ್ತದ್ತೆ. ಆದರೆ, ಕೃಷಿಯಲ್ಲಿನ ಬದಲಾವಣೆ -ವ್ಯಾಪಕವಾದ ಆರ್ಥಿಕ ಬೆಳೆ, ಆಧುನಿಕ ತಂತ್ರಜ್ಞಾನ, ಜನಸಂಖ್ಯಾ ಬೆಳವಣಿಗೆ, ನಗರೀಕರಣ ಮೊದಲಾದ ಕಾರಣಗಳು ನೀರಿನ ಅತೀಯಾದ ಬಳಕೆಗೆ ಕಾರಣ. ಪರಿಸರ ಸಂಪನ್ಮಾಲಗಳ ಅಸಮರ್ಪಕ ನಿರ್ವಹಣೆಯು ಭೂಮಿಯ ಅಂತರಾಳಕ್ಕೆ ನೀರು ಸೋಸುವಿಕೆಯನ್ನು ತಡೆಯತ್ತಾ ಕ್ರಮೇಣವಾಗಿ ಭೂಮಿಯ ಅಂತರ್ಜಲ ಮಟ್ಟ ಕಡಿಮೆಯಾಗಿ ಮನುಷ್ಯ ಸಹಿತ ಜೀವವೈವಿಧ್ಯದ ಅಸ್ತಿತ್ವದ ಮೇಲೆ ಪರಿಣಾಮ ಬೀರಲಿದೆ.
ಜಲಮಟ್ಟ ಕುಸಿತ, ಕಾರ್ಮಿಕರ ಸಮಸ್ಯೆ ,ಸ್ಥಳ ಮತ್ತು ಸಮಯಾವಕಾಶದ ಕೊರತೆ, ಭೂಮಿಯ ಮೇಲ್ಮೈ ನೀರಿನ ಸಂಗ್ರಹಣೆಯಲ್ಲಿನ ಮಿತಿಮೀರಿದ ಖರ್ಚುವೆಚ್ಚಗಳು, ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಲು ಕಾರಣ. ಸದ್ಯದ ಪರಿಸ್ಥಿತಿಯಲ್ಲಿ ಪರಿಸರದ ಹಿತದೃಷ್ಟಿಯಲ್ಲಿ ಕೊಳವೆ ಬಾವಿಗಳ ನಿರ್ಮಾಣದಲ್ಲಿನ ಹತೋಟಿ ಜೊತೆಗೆ ಜಲಮರುಪೂರಣ ಅತ್ಯಗತ್ಯ.
ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಲು ಶಾಲಾ ಪಠ್ಯ ವಿಷಯದಲ್ಲಿ ಪರಿಸರದ ಸೂಕ್ಮ ವಿಷಯಾಧರಿತ ಸಂದರ್ಶನದ ಅವಕಾಶ ಸಿಗುವಂತೆ ಶಾಲಾ ಪಠ್ಯರಚನೆ ಅತೀಅಗತ್ಯ. ಎಂದು ಜೀವ ಜಲ ಕಿರುಚಿತ್ರದ ನಿರ್ದೇಶಕಾದ ಅಶೋಕ್ ಮೊಟ್ಟಕುಂಜ ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಜಲ ಸಾಕ್ಷರತಾ ಅಭಿಯಾನವನ್ನು ಸಾರುವ ಕಿರುಚಿತ್ರ ಜೀವಜಲದ ಚಿತ್ರವನ್ನು ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.