×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಡಾ| ಕೆ. ಕಮಲಾಕ್ಷರಿಗೆ ವಿದಾಯ ಕೂಟ

ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ| ಕೆ.ಕಮಲಾಕ್ಷರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಯ ಸಂದರ್ಭ ನೋಡಿ ನಮ್ಮ ನಿರೀಕ್ಷೆಗೂ ಮೀರಿ ತಮ್ಮದೇ ಆದ ರೀತಿಯಲ್ಲಿ ಸಂಸ್ಥೆಯ ಒಳಿತಿಗಾಗಿ ನಿರಂತರವಾಗಿ ದುಡಿದ ಡಾ| ಕಮಲಾಕ್ಷರು ಶುಕ್ಲ ಪಕ್ಷದ ಚಂದ್ರನಂತೆ ಮುಂದೆ ಬದುಕಿನಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘವು ನಾಲಂದ ಕಾಲೇಜನ್ನು ವಹಿಸಿಕೊಂಡಾಗ ಮುಂದೆ ಇದನ್ನು ನಡೆಸುವ ಸಾರಥಿ ಯಾರೆಂಬ ವಿಚಾರ ಬಂದಾಗ ಎಲ್ಲರೂ ಸೂಚಿಸಿದ್ದು ಡಾ| ಕಮಲಾಕ್ಷರ ಹೆಸರನ್ನು. ಇಂದು ಅವರ ಆಸಕ್ತಿಯ ಕ್ಷೇತ್ರದ ಇನ್ನೊಂದು ಸಂಸ್ಥೆಯನ್ನು ಮುನ್ನಡೆಸಲು ಹೋಗುತ್ತೇನೆ ಎಂದಾಗ ನಾವು ಕಳುಹಿಸಬೇಕಾದದ್ದು ನಮ್ಮ ಧರ್ಮ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ತಿಳಿಸಿದರು. ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ಕರುಣಿಸಲಿ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಖಜಾಂಚಿ ಗೋಪಾಲ ಚೆಟ್ಟಿಯಾರ್, ಆಡಳಿತಾಧಿಕಾರಿ ಕೆ. ಶಿವಕುಮಾರ್, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಭಾರ ಪ್ರಾಂಶುಪಾಲ ಎಂ. ಅಶೋಕ್,ಶಿಶು ಮಂದಿರದ ಅಧ್ಯಕ್ಷ ಶ್ರೀಹರಿ ಭಟ್ ಮೊದಲಾದವರು ಶುಭ ಹಾರೈಸಿದರು.

ಡಾ| ಕೆ.ಕಮಲಾಕ್ಷರು ತಮ್ಮ ಅಂತರಂಗದ ಮಾತುಗಳನ್ನಾಡುತ್ತಾ ಈ ನಾಲಂದಾ ಮಹಾ ವಿದ್ಯಾಲಯದ ಜವಾಬ್ದಾರಿಯನ್ನು ಹಿರಿಯರೆಲ್ಲಾ ಸೇರಿ ನೀನು ನಡೆಸಿಕೊಂಡು ಹೋಗ ಬೇಕು ಎಂದಾಗ ಧೈರ್ಯ ಬರಲಿಲ್ಲ ಆದರೂ ಹಲವು ವರ್ಷಗಳ ಅಧ್ಯಾಪನದ ಮತ್ತು ಸರಕಾರಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿಯಾದ ಅನುಭವದಿಂದ ನಡೆಸಬಲ್ಲೆ ಎಂಬ ಆತ್ಮ ವಿಶ್ವಾಸವಿತ್ತು ಮತ್ತು ಹಿರಿಯರ ಆಶಿರ್ವಾದ ಮತ್ತು ಕಿರಿಯರ ಸಹಕಾರದಿಂದ ಇಂದು ಕಾಲೇಜೆಂಬ ರೈಲು ಹಳಿಗೆ ಬಂದು ನಿಲ್ಲಿಸಿ ನಿಧಾನವಾಗಿ ಓಡಲು ಪ್ರಾರಂಭವಾಗಿದೆ. ಮುಂದೆ ಬರುವವರು ಇದರ ವೇಗವನ್ನು ಹೆಚ್ಚಿಸುವ ಕೆಲಸ ಮಾಡಿದರೆ ಸಾಕು. ಅದು ಇನ್ನು ಕಷ್ಟವಾಗಲಾರದು ಎಂಬ ವಿಶ್ವಾಸ ನನಗಿದೆ. ಉತ್ತಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಗಳಿವೆ. ನಾನು ಮಂಜೇಶ್ವರದಲ್ಲಿದ್ದರೂ ನನ್ನ ಮನಸ್ಸು ನಾಲಂದದಲ್ಲಿರುತ್ತದೆ ಎಂದರು. ಉಪನ್ಯಾಸಕಿ ಶಿಲ್ಪಾ ಹೆಗಡೆ ಪ್ರಾರ್ಥಿಸಿ. ಸ್ಟಾಫ್ ಕಾರ್‍ಯದರ್ಶಿ ಕೆ. ಕೇಶವ ಶರ್ಮ ವಂದಿಸಿದರು.