ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಗಳ ಜನ್ಮದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ಟರು ಭಾಗವಹಿಸಿದರು.
ದೇಶದ ಜನರನ್ನು ಸಂಘಟಿಸಿ ಬ್ರಿಟೀಷರ ವಿರುದ್ದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಮೊದಲಾದ ಚಳವಳಿಗಳನ್ನು ನಡೆಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಹೇಳಿದ್ದಲ್ಲದೆ ಅವರ ಬದುಕಿನ ಮಹತ್ವದ ಘಟನೆಗಳನ್ನು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಗಳ ಬಗ್ಗೆ ಮಾತನಾಡುತ್ತಾ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಶಾಸ್ತ್ರಿಯವರು ಒಳ್ಳೆ ಆಡಳಿತಗಾರ, ಶಾಂತಿಪ್ರಿಯ, ರಾಜಕೀಯ ಮುತ್ಸದ್ಧಿ ಮಾತ್ರವಲ್ಲದೆ ಉತ್ತಮ ಪ್ರಜೆಯಾದ ಅವರು ಕೃಷಿರಂಗಕ್ಕೆ ಪ್ರೋತ್ಸಾಹ ನೀಡಲು ಜೈಜವಾನ್ ಜೈಕಿಸಾನ್ ಎಂಬುದಾಗಿ ಘೋಷಿಸಿದ ಮಹಾನ್ ವ್ಯಕ್ತಿ ಎಂದರು.
ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರವರು ಇಂದು ಜಗತ್ತು ಭಯಾನಕದೆಡೆಗೆ ಹೋಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಇಬ್ಬರು ಮಹಾನ್ ವ್ಯಕ್ತಿಗಳನ್ನು ಮಕ್ಕಳಿಗೆ ಪರಿಚಯಿಸಿಕೊಡಬೇಕಾದುದು ಅತೀ ಅಗತ್ಯ. ಮೊದಲು ಮನಸ್ಸು ಸ್ವಚ್ಛವಾಗಬೇಕು ಅನಂತರ ಪರಿಸರ ಸ್ವಚ್ಛ ಮಾಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಕಮಲಾಕ್ಷ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕಿ ಕುಮಾರಿ ಗೀತಾ.ಪಿ ಸ್ವಾಗತಿಸಿ, ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಕಾಲೇಜು ಪರಿಸರವನ್ನು ಸ್ವಚ್ಛ ಗೊಳಿಸಿದರು.