ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ದೇಶದ 70 ನೇ ಸ್ವಾತಂತ್ರ್ಯ ದಿನವನ್ನು ಕವಿ, ಸಾಹಿತಿ ಹಾಗೂ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ವಾಸುದೇವ ಭಟ್‌ರವರು ಧ್ವಜಾರೋಹಣವನ್ನು ಮಾಡುವುದರ ಮೂಲಕ ಆಚರಿಸಲಾಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ವಾಸುದೇವ ಭಟ್‌ರವರು ಮಾತನಾಡುತ್ತ ಭಾರತಮಾತೆಯ ಮಕ್ಕಳಾದ ನಾವು ಈ ಮಣ್ಣು, ಈ ನಾಡು ನಮ್ಮದು ಎಂದು ಪ್ರೀತಿಸಿ ರಕ್ಷಿಸಿಕೊಂಡು ಬಂದರೆ ಮಾತ್ರ ಭಾರತ ಎಲ್ಲ ಕ್ಷೇತ್ರಗಳಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಅವರು ಸ್ವಾತಂತ್ರ್ಯ ಎಂಬುದು ಸ್ವೇಚ್ಚೆಯಾಗದೆ ಜವಾಬ್ದಾರಿಯುತವಾಗಿರಬೇಕು ಎಂದು ನುಡಿದರು. ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರೂ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೂ ಆದ ಶ್ರೀ ಶಂ. ನಾ. ಖಂಡಿಗೆಯವರು ನಮಗೆ ದೊರೆತ ಸ್ವಾತಂತ್ರ್ಯ ಬ್ರಿಟಿಷರೇನೂ ಬಳುವಳಿಯಾಗಿ ಕೊಟ್ಟುದಲ್ಲ. ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಸ್ವಾತಂತ್ರ್ಯ ಲಭಿಸಿದೆ. ಅದನ್ನು ಅರಿತುಕೊಂಡು ಇತರರಿಗೆ ತೊಂದರೆಯಾಗದಂತೆ ಬದುಕಬೇಕು ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರ್‌ರವರು ನಮ್ಮ ಸ್ವಾತಂತ್ರ್ಯ ಸಭ್ಯತೆಯ ಎಲ್ಲೆಮೀರದೆ ಅರ್ಥಪೂರ್ಣವಾಗಿರಬೇಕು ಎಂದರು. ಪ್ರಾಂಶುಪಾಲರಾದ ಡಾ| ಕೆ. ಕಮಲಾಕ್ಷರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಊರ ಮಹನೀಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಉಷಾಶ್ರೀ ಸ್ವಾಗತಿಸಿ, ಉಪನ್ಯಾಸಕ ಕಿಶನ್ ವಂದಿಸಿದರು. ಕಾರ್ಯಕ್ರಮದ ಅನಂತರ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.