ಅಂತಾರಾಷ್ಟ್ರೀಯ ಯೋಗ ದಿನವನ್ನು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೋಳಾರು ಸತೀಶ್ಚಂದ್ರ ಭಂಡಾರಿಯವರು ಮಾತನಾಡುತ್ತ ಜೂನ್ 21 ಎಂದರೆ ದೀರ್ಘ ಹಗಲಿರುವ ದಿವಸ ಅದೇ ದಿನವನ್ನು ಯೋಗದಿನವಾಗಿ ಆಚರಿಸುವಂತೆ ಮೋದಿಯವರು ತಿಳಿಸಿದರು, ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಚಾರ ಮಾಡಿದರು. ಆದರೆ ಯೋಗ ಎಂಬುದು ದಿನಾಚರಣೆಯನ್ನು ಆಚರಿಸುವಲ್ಲಿಗೆ ನಿಲ್ಲಬಾರದು ಅದು ಜೀವನದುದ್ದಕ್ಕೂ ನಡೆಸಬೇಕಾದ ಕ್ರಿಯೆ. ದೈಹಿಕ ಮಾನಸಿಕ ಶುಚಿತ್ವದಿಂದ ಜೀವನದಲ್ಲಿ ಯೋಗ ಮಾಡುತ್ತ ಬಂದರೆ ನಾವು ರೋಗ ಮುಕ್ತರಾಗುತೇವೆ ಎಂದರು.
ಕಾಲೇಜಿನಲ್ಲಿ ಒಂದು ವಾರಗಳ ಯೋಗ ಶಿಬಿರವನ್ನು ನಡೆಸಿದ ಶ್ರೀಮಾತಾ ಯೋಗ ಪೌಂಡೇಶನ್, ಮಲ್ಲ ಇದರ ನಿದೇಶಕರಾದ ಯೋಗಚಾರ್ಯ ಶ್ರೀ ವಿದ್ಯಾಧರ ಅವರು ಯೋಗ ಎಂಬುದು ವ್ಯಾಯಮವಲ್ಲ, ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕಿರುವ ಒಂದು ವಿದ್ಯೆ ಅದನ್ನು ಆಚಾರ್ಯ ಮುಖೇನ ಅಭ್ಯಸಿಸುವುದು ಅಗತ್ಯ ಶ್ವಾಸೋಚ್ವಾಸಗಳಲ್ಲಿ ಮತ್ತು ಆಹಾರಗಳಲ್ಲಿ ನಿಯಮವಿದ್ದು ಯೋಗಾಸನಗಳನ್ನು ಮಾಡಿದರೆ ಹಲವಾರು ರೋಗಗಳನ್ನು ತಡೆಗಟ್ಟಬಹುದು ಎಂದರು.
ಆಡಳಿತಾಧಿಕಾರಿ ಕೆ. ಶಿವಕುಮಾರ್ ಅವರು ಯೋಗ ದಿನದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ, ಆತ್ಮ ಪರಮಾತ್ಮನೆಡೆಗೆ ಸಾಗುವ ಮಾರ್ಗವೇ ಯೋಗ. ಭೋಗ ಜೀವನದಲ್ಲಿ ಕಾಲ ಕಳೆದ ಪಾಶ್ಚಾತ್ಯರು ಯೋಗದ ಮಹತ್ವವನ್ನು ಅರಿತಿದ್ದಾರೆ. ಯೋಗ ಗುರು ಪತಂಜಲಿ ಅಷ್ಟಾಂಗ ಯೋಗವನ್ನು ತಿಳಿಸಿದ್ದಾರೆ. ಇದನ್ನು ಪ್ರತಿನಿತ್ಯ ನಿಯಮದಂತೆ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿ ಪ್ರಶಸ್ತ ವಿಜೇತರನ್ನು ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉಪನ್ಯಾಸಕ ಅನೀಶ್ ಕುಮಾರ್ ಸ್ವಾಗತಿಸಿ, ರಂಜಿತ್ ಕುಮಾರ್ ನೆಟ್ಟಣಿಗೆ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಯೋಗದಿನಾಚರಣೆಯಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅನಂತರ ಯೋಗಾಸನಗಳ ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಸಲಾಯಿತು.