ಪೆರ್ಲ : ಒಂದು ವಸ್ತುವನ್ನು ಪರೀಕ್ಷಿಸಿ ಅದರಲ್ಲಿರುವ ವಿಶೇಷತೆಗಳನ್ನು ಗ್ರಹಿಸುವ ವೈಜ್ಞಾನಿಕ ಮನೋಧರ್ಮ ಶಿಶುಮಂದಿರದಲ್ಲಿ ಕಲಿಯುವ ಮಕ್ಕಳಲ್ಲಿ ಬೆಳೆಯುತ್ತದೆ. ಇದು ವಿಜ್ಞಾನಿ ಮನೋಧರ್ಮ. ಮಗು ಅದರಷ್ಟಕ್ಕೆ ನಲಿಯುತ್ತ ಕಲಿಯಬೇಕು. ಕಲಿಯುತ್ತ ಬೆಳೆಯಬೇಕು. ಅದಕ್ಕಾಗಿ ಮಗುವನ್ನು ಎಳವೆಯಲ್ಲಿ ನಿರ್ಬಂಧಿಸಬಾರದು. ಅವರ ಇಚ್ಛಾನುಸಾರ ಬೆಳೆಯಲು ಬಿಟ್ಟಾಗ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ನಮ್ಮ ಶಿಶುಮಂದಿರದ ಪರಿಕಲ್ಪನೆಯೆ ಅಂತಹುದು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಪೆರ್ಲ ನಾಲಂದ ಮಹಾ ವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ ’ವಿವೇಕಾನಂದ ಶಿಶುಮಂದಿರ’ ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶ್ರೀಮತಿ ಉಷಾ. ಟಿ.ಆರ್. ಕೆ ಭಟ್ ರವರು ’ವಿವೇಕಾನಂದ ಶಿಶುಮಂದಿರ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಅಂಗ ಸಂಸ್ಥೆಯಾಗಿ ಕಳೆದ ವರ್ಷ ನಾಲಂದ ಮಹಾವಿದ್ಯಾಲಯ ಕಾಸರಗೋಡು ಜಿಲ್ಲೆಯ ಶಿಕ್ಷಣದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈಗ ಅದೆ ಸಂಘದ ಅಂಗ ಸಂಸ್ಥೆಯಾಗಿ ಕಾಸರಗೋಡು ಜಿಲ್ಲೆಯಲ್ಲಿಯೆ ವಿನೂತನ ಶಿಶುಮಂದಿರವಾಗಿ ’ವಿವೇಕಾನಂದ ಶಿಶುಮಂದಿರ’ ಉದ್ಘಾಟನೆಯಾದುದು ಶಿಕ್ಷಣ ಪ್ರಿಯರಿಗೆ ಮತ್ತು ನಾಗರಿಕರಿಗೆ ಹಿತನೀಡಿದೆ.
ನಾಲಂದ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಅವರು ವಿದ್ಯೆಯಿಂದ ವಿನಯ, ಸಂಸ್ಕಾರಗಳು ವೃದ್ಧಿಯಾಗುತ್ತವೆ. ಮಗುವಾಗಿದ್ದಾಗಲೇ ಇದು ಬೆಳೆದು ಬಂದರೆ ಒಬ್ಬ ಉತ್ತಮ ಭಾರತೀಯನಾಗುತ್ತಾನೆ. ಅಂತಹ ಭಾರತೀಯರನ್ನು ಸೃಷ್ಟಿಸುವ ಮಂದಿರ ಇದಾಗಲಿ ಎಂದು ಹಾರೈಸಿದರು. ತಡೆಗಲ್ಲು ರಾಮಕೃಷ್ಣ ಭಟ್ಟ ದಂಪತಿಗಳು ಶಿಶುಮಂದಿರಕ್ಕೆ ಶುಭ ಹಾರೈಸಿದರು. ನಾಲಂದ ಮಹಾವಿದ್ಯಾಲಯದ ಅಧ್ಯಕ್ಷರಾದ ಆನೆಮಜಲು ವಿಷ್ಣು ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ತಿಕ್ ಶಾಸ್ತ್ರಿ ಸ್ವಾಗತಿಸಿ, ಶ್ರೀಮತಿ ನಳಿನಿ ಕೆ. ವೈ ವಂದಿಸಿದರು. ನಾಲಂದದ ಭಾಗ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶ್ರೀಹರಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿಟ್ಲದ ಮೈತ್ರೇಯಿ ಗುರುಕುಲದ ಶಾಂತಾ ಮಾತಾಜಿ, ಕಲ್ಲಡ್ಕ ಶಿಶುಮಂದಿರದ ಗಂಗಾ ಮಾತಾಜಿ ಮತ್ತು ಕಜಂಪಾಡಿ ಶ್ರೀ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.