×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ರಂಗ ಚಿನ್ನಾರಿಯ ‘ಕಾಸರಗೋಡು ಕನ್ನಡ ಹಬ್ಬ’ದ ಪ್ರಯುಕ್ತ ರಂಜಿಸಿದ ಭರತನಾಟ್ಯ ಕಾರ್ಯಕ್ರಮ

ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಸದಸ್ಯೆ ನಳಿನಿ ಟೀಚರ್ ಅವರು ಮಾತನಾಡುತ್ತಾ “ಭಾರತೀಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಮಕ್ಕಳಲ್ಲಿ ಎಳವೆಯಿಂದಲೇ ಸ್ಫೂರ್ತಿ ತುಂಬುವ ಕೆಲಸವನ್ನು ಹೆತ್ತವರು ಮಾಡಬೇಕು. ಭಾರತ ದೇಶ ಕಲೆಗಳ ತವರೂರು, ಯಕ್ಷಗಾನ, ಭರತನಾಟ್ಯ, ಕೂಚುಪುಡಿಯಂತಹ ಶ್ರೇಷ್ಟ ಕಲೆಗಳಿಂದ ಸಾಂಸ್ಕೃತಿಕ ಮೌಲ್ಯ ಮತ್ತಷ್ಟು ಹೆಚ್ಚುವಂತಾಗಿದೆ” ಎಂದು ತಿಳಿಸಿದರು.

ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗಾಗಿ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರಲ್ಲಿನ ಕಲಾಪ್ರತಿಭೆ ಹೊರಹೊಮ್ಮುವಂತೆ ಮಾಡುವಲ್ಲಿ ರಂಗಚಿನ್ನಾರಿ ಮಹತ್ವದ ಪಾತ್ರ ವಹಿಸಿದೆ. ಜತೆಗೆ ಮಹಿಳೆಯರನ್ನು ಒಟ್ಟುಗೂಡಿಸಿ ಅವರಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ‘ನಾರಿ ಚಿನ್ನಾರಿ’ ಸಂಘಟನೆಗೆ ವೇದಿಕೆ ಒದಗಿಸಿಕೊಟ್ಟಿರುವುದಾಗಿ ತಿಳಿಸಿದರು. ಕಲಾಪೋಷಕಿ ರತ್ನಾವತಿ ಜೆ. ಬೈಕಾಡಿ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಪ್ರಭಾರ ಪ್ರಾಂಶುಪಾಲ ಸುರೇಶ್ ಸ್ವಾಗತಿಸಿ, ರಂಗಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿ, ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ಬೈಕಾಡಿ ಪ್ರತಿಷ್ಠಾನದ ಅಂಗವಾಗಿರುವ ರತ್ನಕಲಾಲಯ ನಿರ್ದೇಶಕಿ ಅಕ್ಷತಾ ಬೈಕಾಡಿ ಅವರೊಂದಿಗೆ ವಿದುಷಿ ಶ್ರೀಮತಿ ರಶ್ಮೀ ಉಡುಪ ಮತ್ತು ರಶ್ಮೀ ಭಟ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.