ಪೆರ್ಲ: ಕಾಸರಗೋಡು ಜಿಲ್ಲಾಮಟ್ಟದಲ್ಲಿರುವ ಹೈಯರ್ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೆರ್ಲದ ನಾಲಂದ ಕಾಲೇಜಿನ ಬಗ್ಗೆ ಮತ್ತು ಭೂಮಿಶಾಸ್ತ್ರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜಿನ ಸ್ನಾತಕೋತ್ತರ ಪದವಿ ಭೂಮಿಶಾಸ್ತ್ರ ವಿಭಾಗವು, ಎರಡು ದಿನಗಳ ಸಹವಾಸ ಕಾರ್ಯಾಗಾರ ’ಜಿಯೋ ಫಾರಂ – 2016’ ನ್ನು ನಾಲಂದ ಕಾಲೇಜಿನಲ್ಲಿ ವಿವಿಧ ಕಲಿಕಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅಚ್ಚುಕಟ್ಟಾಗಿ ಆಯೋಜಿಸಿತ್ತು. ಸುಮಾರು ನೂರರಷ್ಟು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದರು. ’ಜನವರಿ ತಿಂಗಳ ಆಕಾಶ’ ಎಂಬ ಹೆಸರಿನಲ್ಲಿ ಆಕಾಶ ವೀಕ್ಷಣೆಗೆ ಆವಕಾಶ ಕಲ್ಪಿಸಲಾಗಿತ್ತು.
ಜಿಯೋ ಫಾರಂ-2016 ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ ವಹಿಸಿದ್ದರು. ಎಣ್ಮಕಜೆ ಪಂಚಾಯತಿನ ಉಪಾಧ್ಯಕ್ಷ ಪುಟ್ಟಪ್ಪ ಕೆ. ಉದ್ಘಾಟಿಸಿ ಮಾತನಾಡುತ್ತಾ, ಇಂದು ವಿದ್ಯಾರ್ಥಿಗಳಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅನೇಕ ಅವಕಾಶಗಳು ಸಿಗುತ್ತಿರುವುದು ಒಳ್ಳೆಯ ವಿಚಾರ ಎಂದರು. ಕಣ್ಣೂರು ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ| ಜಯಪಾಲ್.ಜಿ, ಪೆರಿಯ ಅಂಬೇಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಿ.ಬಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಎಣ್ಮಕಜೆ ಗ್ರಾಮಪಂಚಾಯತಿನ ಸದಸ್ಯೆ ಆಯಿಷ. ಎ.ಎ ಮತ್ತು ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ಅವರು ಶುಭ ಹಾರೈಸಿದರು. ಭೂಮಿಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಲಾಷ್.ಟಿ.ಕೆ ಸ್ವಾಗತಿಸಿ, ಸಹಉಪನ್ಯಾಸಕಿ ವಿಜಿನಾ.ಪಿ.ಪಿ ವಂದಿಸಿದರು.
ಆಕರ್ಷಕ ಭೂಮಿ ಮತ್ತು ಭೂಮಿಶಾಸ್ತ್ರದ ಕುರಿತು ಡಾ| ಟಿ.ಕೆ.ಪ್ರಸಾದ್, ಸಹ ಉಪನ್ಯಾಸಕರು, ಭೂಮಿಶಾಸ್ತ್ರ ವಿಭಾಗ, ಮಂಜೇಶ್ವರ ಅವರು ತರಗತಿ ನಡೆಸಿಕೊಟ್ಟರು. ಕೇರಳಾ ಶಾಸ್ತ್ರ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೋ. ಎಂ. ಗೋಪಾಲನ್ ಅವರು ಪ್ರಾಚೀನ ಖಗೋಳಶಾಸ್ತ್ರದ ಕುರಿತು, ವೆಲ್ಲೂರ್ ಗಂಗಾಧರನ್, ಡೈರೆಕ್ಟರ್, ಆಕಾಶ ನಿರೀಕ್ಷಣಾ ಕೇಂದ್ರ, ಪಯ್ಯನ್ನೂರ್ ಇವರು ’ಜನವರಿ ತಿಂಗಳ ಆಕಾಶ’ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು.