ಪೆರ್ಲ: ’ಮಾನವನಲ್ಲಿ ಕೀಳರಿಮೆ ಇರಬಾರದು, ತನ್ನ ಗುರಿಯಕಡೆಗೆ ಸದಾ ಸಾಗುತ್ತಿರಬೇಕು, ಹೆದರಬೇಡ ಶಕ್ತಿವಂತನಾಗು, ಒಳ್ಳೆಯವನಾಗಿರು, ಒಳ್ಳೆಯದನ್ನೇ ಮಾಡು’ ಮುಂತಾದ ವಿವೇಕಾನಂದರ ವಿಚಾರ ಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ನರಸಿಂಹ ಭಟ್ ಸೂರಂಬೈಲು ಕರೆನೀಡಿದ್ದಾರೆ. ಅವರು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಜೀವನ ಕಲೆ ದೊಡ್ಡಕಲೆ ಅದು ಕಲಿಸಿಬರುವುದಲ್ಲ ಅದನ್ನು ನಾವು ಮೈಗೂಡಿಸಿಕೊಳ್ಳಬೇಕುಎಂದ ಅವರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಮಾನವರಾದ ನಾವು ಮಾಧವರಾಗಬಹುದು ಎಂದರು.
ಕಾಲೇಜಿನ ಪಾಂಶುಪಾಲ ಡಾ| ಕೆ. ಕಮಲಾಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿವೇಕಾನಂದರು ಒಬ್ಬ ದೇಶಭಕ್ತ ಸನ್ಯಾಸಿ ದೇಶದ ಒಳಿತಿಗಾಗಿ ಚಿಂತಿಸಿದರು ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಅವರ ಚಿಂತನೆಗಳನ್ನು ರೂಢಿಸಿಕೊಂಡು ನಾವು ಉತ್ತಮ ದೇಶಭಕ್ತರಾಗಬೇಕು ಎಂದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ.ಶಿವಕುಮಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಅನೀಶ್ ಕುಮಾರ್ ಅವರು ವಂದಿಸಿದರು.