×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

“ಕಥನ ಕಾರಣ” ಅಧ್ಯಯನ ಕೃತಿ ಬಿಡುಗಡೆ

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಹಾಗೂ ಪೆರ್ಲ ನಾಲಂದ ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ಡಾ.ಸುಭಾಷ್ ಪಟ್ಟಾಜೆ ಅವರ ಅಧ್ಯಯನ ಕೃತಿ “ಕಥನ ಕಾರಣ” ಬಿಡುಗಡೆಗೊಳಿಸಲಾಯಿತು‌

ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಜ್ಞಾನವಾಹಿನಿಯಾದ ಭಾಷೆಗೆ ಭಾರತೀಯರು ಬಹಳ ಮಹತ್ವವನ್ನು ಕೊಡುತ್ತಾ ಬಂದಿದ್ದಾರೆ.ಈ ನಿಟ್ಟಿನಲ್ಲಿ ಮನುಷ್ಯನ ಮನಸ್ಸು ಮತ್ತು ಬುದ್ಧಿ ಕಾರ್ಯಪ್ರವೃತ್ತವಾಗುವುದು ಮುಖ್ಯ.ಇದರ ಹಿಂದೆ ನಾಲ್ಕು ಚಕ್ಷುಗಳ ದುಡಿಮೆ ಇರಬೇಕು.ದೇವರ ಮುಂದೆ ಹೊರಕಣ್ಣು ಮುಚ್ಚಿ ಮನಃ ಚಕ್ಷುವನ್ನು ತೆರೆಯುವುದು ಮೊದಲ ಹಂತ.ಮೂರನೆಯದು ಜ್ಞಾನಚಕ್ಷು. ಋಷಿಗಳಿಂದ ತೊಡಗಿ ಉತ್ತಮ ಸಂದೇಶಗಳನ್ನು ಕೊಡುವಲ್ಲಿ ನಾಲ್ಕನೆಯದಾದ ದಿವ್ಯಚಕ್ಷು ಕೆಲಸ ಮಾಡುತ್ತದೆ.ನಾವೆಲ್ಲರೂ ಒಳಗಣ್ಣುಗಳನ್ನು ತೆರೆದು ಅರಿವಿನ ಹಾದಿಯಲ್ಲಿ ಸಾಗೋಣ.ನಿರಂತರ ಅಧ್ಯಯನ ಹಾಗೂ ಸತತ ಪರಿಶ್ರಮದ ಮೂಲಕ ಸಂಶೋಧನ ಕೃತಿಯನ್ನು ಹೊರ ತಂದಿರುವ ಡಾ.ಸುಭಾಷ್ ಪಟ್ಟಾಜೆ ಹೊಸತನ್ನು ಸಾಧಿಸಿದ್ದಾರೆ.ಈ ಕೃತಿ ಇನ್ನಷ್ಟು ಹೊಸತನಗಳಿಗೆ ಪ್ರೇರಣೆಯಾಗಲಿ.ಶ್ರೇಷ್ಠ ಮೌಲಿಕ ಕೃತಿಗಳು ಇನ್ನಷ್ಟು ಮೂಡಿ ಬರಲಿ ಎಂದು ಹಾರೈಸಿದರು.

ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ. ಶ್ರೀಧರ್ ಕೃತಿ ವಿಮರ್ಶೆ ನಡೆಸಿ ಮಾತನಾಡಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಚನೆಗೊಂಡ ಮೂರು ದಶಕಗಳಷ್ಟು ಕಾಲದ ಕತೆಗಳನ್ನು ಅಧ್ಯಯನ ಮಾಡಿ ರಚಿಸಿದ ಈ ಕೃತಿ ಆಯಾ ಕಾಲಗಳಲ್ಲಿ ಕಂಡು ಬಂದ ಪರಕೀಯ ಪ್ರಜ್ಞೆಯ ನೆಲೆಗಳನ್ನು ಆಳವಾಗಿ ವಿಶ್ಲೇಷಿಸಿದೆ.ಕನ್ನಡದಲ್ಲಿ ಮೊದಲು ಮತ್ತು ಮಲಯಾಳಂನಲ್ಲಿ ನಂತರ ಬಂದ ಆಧುನಿಕತೆಯ ಸ್ವರೂಪ ಇಲ್ಲಿ ಅನಾವರಣಗೊಂಡಿದೆ.ಕತೆಗಳ ವಿಸ್ತಾರವಾದ ಓದು ಮತ್ತು ಅಧ್ಯಯನದ ಮೂಲಕ ಅಸ್ತಿತ್ವವಾದ, ಪರಕೀಯ ಪ್ರಜ್ಞೆ, ಏಕಾಂಗಿತನ, ಸಾಮಾಜಿಕ ಬದುಕಿನ ತಲ್ಲಣ, ಸ್ತ್ರೀ ಸಂವೇದನೆಗಳನ್ನು ಗುರುತಿಸಿ ಒಂದು ಕಡೆಯಲ್ಲಿ ಕೇಂದ್ರೀಕರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

 

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಾಜೆ ಅವರ ಕೃತಿ ಕುಮಾರ ವ್ಯಾಸನ ‘ಸುಧಾ ವಿನೂತನ ಕಥನ ಕಾರಣ’ ಎಂಬ ಮಾತನ್ನು ನೆನಪಿಸಿದೆ.ಕಾಸರಗೋಡಿನ ನೆಲದಲ್ಲಿ ಅದೆಷ್ಟೋ ಅಪೂರ್ವ ಪ್ರತಿಭೆಗಳಿವೆ.ಗೀತೆಯಲ್ಲಿ ಉಲ್ಲೇಖಿಸಿದ ಕ್ಷುದ್ರ ಹೃದಯ ದೌರ್ಬಲ್ಯವನ್ನು ನಾವು ಗೆಲ್ಲಬೇಕಿದೆ.ಸಣ್ಣ ಪ್ರದೇಶದಲ್ಲಿರುವವರೆಂಬ ಕೀಳರಿಮೆ ಬೇಡ.ನಮ್ಮವರ ಸಾಹಿತ್ಯ ಪ್ರೀತಿ, ಕನ್ನಡ ಸಾರಸ್ವತ ಲೋಕಕ್ಕೆ ಅವರಿತ್ತ ಕೊಡುಗೆಗಳು ಜಾಗತಿಕ ಮಹತ್ವವನ್ನು ಪಡೆಯುವಂತಾಗಲಿ ಎಂದರು.

ಸಾಹಿತ್ಯ – ಸಂಶೋಧನೆಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸುಭಾಷ್ ಪಟ್ಟಾಜೆ ಅವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.ವಿಶೇಷ ಆಮಂತ್ರಿತರ ಜೊತೆಯಲ್ಲಿ ಮುಕ್ತ ಸಂವಾದ ಮತ್ತು ಪುಸ್ತಕ ಪ್ರದರ್ಶನ ನಡೆಯಿತು.ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ಶೇಣಿ ಸ್ವಾಗತಿಸಿದರು‌.ಕನ್ನಡ ಲೇಖಕರ ಸಂಘದ ಸಹ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಂದಿಸಿದರು.ಉಪನ್ಯಾಸಕಿ ಶಾಂಭವಿ ನಿರೂಪಿಸಿದರು.