×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ಕಾಲೇಜಿನಲ್ಲಿ ಓಣಂ ದಿನಾಚರಣೆ

ಪೆರ್ಲ : ಯಾವನೆ ಒಬ್ಬನ ಸಾಧನೆ ಮತ್ತು ಸಾಮರ್ಥ್ಯ ಅದು ಆತನ ಹುಟ್ಟಿನಿಂದ ನಿರ್ಧರಿತವಾಗುವುದಿಲ್ಲ. ಆತ ಹುಟ್ಟಿದ ನಂತರ ನಡೆಯುವ ಹಾದಿ ಮತ್ತು ಸಮಾಜಕ್ಕೆ ಆತ ಕೊಡುವ ಕೊಡುಗೆಯ ಮೇಲೆ ಆತನ ಶ್ರೇಷ್ಠತೆ ನಿರ್ಧಾರವಾಗುತ್ತದೆ. ಮಹಾಬಲಿ ಇದಕ್ಕೊಂದು ಸ್ಪಷ್ಟ ನಿದರ್ಶನ. ಬಲಿಚಕ್ರವರ್ತಿ ಎಂದೆಂದಿಗೂ ನಾಡಜನತೆ ಮರೆಯದ ರಾಜ್ಯಭಾರ ಮಾಡಿ ಇದನ್ನು ಸಾಧಿಸಿ ತೋರಿಸಿದ್ದಾರೆ. ಆಟಿ ತಿಂಗಳು ಕಳೆದು ಸೋಣೆ ತಿಂಗಳಿನ ಸಮೃದ್ಧಿಯ ದಿನಗಳಲ್ಲಿ ಎಲ್ಲ ಬೇಧಗಳನ್ನು ಮರೆತು ಪರಸ್ಪರ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸುವ ಪರಿಕಲ್ಪನೆ ನೀಡುವ ಸಂಕೇತವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಹಬ್ಬದ ಆಚರಣೆಗೆ ಮಹತ್ವ ಬರುತ್ತದೆ. ನಮ್ಮೊಳಗಿನ ತಮವನ್ನು ನೀಗಿ ಉತ್ತಮ ಆದರ್ಶದ ಬದುಕನ್ನು ಬದುಕಲು ಇದು ನಾಂದಿಯಾಗಬೇಕು ಎಂದು ಸಹಕಾರ ಭಾರತಿಯ ಅಖಿಲ ಭಾರತೀಯ ಕಾರ್ಯದರ್ಶಿ ಅಡ್ವಕೇಟ್ ಕರುಣಾಕರನ್ ನಂಬ್ಯಾರ್ ಕರೆನೀಡಿದರು. ಅವರು ಪೆರ್ಲದ ನಾಲಂದ ಕಾಲೇಜಿನಲ್ಲಿ ಸಂಘಟಿಸಿದ ಓಣಂ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

100_2422

ಕುಟುಂಬ ಮಿಲನ
ಓಣಂ ಹಬ್ಬದ ವಿಶೇಷತೆಗಳಲ್ಲಿ ಬಹಳ ಮುಖ್ಯವಾದುದು ದೇಶ ವಿದೇಶಗಳಲ್ಲಿ ಚೆಲ್ಲಿಹೋದ ಕುಟುಂಬ ಸದಸ್ಯರು ಈ ಸಮಯದಲ್ಲಿ ಒಂದಾಗಿ ಹಬ್ಬವನ್ನು ಆಚರಿಸುವುದು. ಕುಟುಂಬ ಪರಿಕಲ್ಪನೆ ನಶಿಸುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಇಂತಹ ಹಬ್ಬಗಳು ಅದನ್ನು ಮತ್ತಷ್ಟು ಸದೃಢಗೊಳಿಸಲು ಪ್ರೇರಣೆಯಾಗಬೇಕೆಂದು ಕಾಲೇಜಿನ ಆಡಳಿತಾಧಿಕಾರಿ ಶ್ರೀ ಶಿವಕುಮಾರ್ ಹೇಳಿದರು.

ಪಿಶಾಚತ್ವ ತೊಲಗಲಿ
ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ | ಕಮಲಾಕ್ಷ ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ಪಿಶಾಚಿತನ ತೊಲಗಿ ದೇವತ್ವದ ಸುಂದರ ಮನಸ್ಸು ನಿರ್ಮಾಣವಾಗಬೇಕು. ಮೈಮನಗಳಲ್ಲಿ ಸತತ ಕೊಳಕುಗಳನ್ನು ತುಂಬಿಕೊಂಡು ಸಮಾಜದ್ರೋಹಿಗಳಾಗುವ ಮನಸ್ಸುಗಳು ಇಂತಹ ಹಬ್ಬದ ವಾತಾವರಣದಲ್ಲಿ ಬದಲಾದರೆ ಅದು ಸಮಾಜದ ಸ್ವಾಸ್ಥ್ಯಕ್ಕೆ ದೊಡ್ದ ಕೊಡುಗೆ ನೀಡಿದಂತೆ ಎಂದರು.

ಉಪಾನ್ಯಾಸಕರಾದ ಅಭಿಲಾಷ್ ಸ್ವಾಗತಿಸಿದ್ದು ಕೆ. ಕೇಶವ ಶರ್ಮ ವಂದಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಓಣಂ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಕರ್ಷಕ ಪೂಕಳಂ ಎಲ್ಲರ ಗಮನ ಸೆಳೆಯಿತು. ಆಡಳಿತ ಮಂಡಳಿಯ ಸದಸ್ಯರು, ಅತಿಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

DSC01128

ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಲೇಜಿನಲ್ಲಿ ಹಬ್ಬದ ವಾತಾವರಣ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪಾನ್ಯಾಸಕ ಮತ್ತು ಸಿಬ್ಬಂದಿವರ್ಗ ತೊಟ್ಟ ಕೇರಳ ಶೈಲಿಯ ಉಡುಗೆ ತೊಡುಗೆಗಳು, ಪೂಕಳಂ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು, ಮಧ್ಯಾಹ್ನಕ್ಕೆ ಆಡಳಿತ ಸಮಿತಿಯ ವತಿಯಿಂದ ಏರ್ಪಡಿಸಿದ ಕೇರಳ ಶೈಲಿಯ ಭೋಜನ, ಬಾಳೆ ಎಲೆಯ ಊಟದ ಸಾಂಪ್ರದಾಯಿಕ ಶೈಲಿಯ ಗಮ್ಮತ್ತು ಕಾಲೇಜಿನ ನಿತ್ಯದ ವಾತಾವರಣವನ್ನು ಬಹಳಷ್ಟು ಮರೆಸಿತ್ತು.