ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ದಿನಾಂಕ 28-07-2015 ರಂದು ಭಾರತದ ಮಹಾನ್ ಸುಪುತ್ರ ದಿ.ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಶ್ರದ್ದಾಂಜಲಿ ಸಭೆ ಜರಗಿತು. ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಕಮಲಾಕ್ಷರು ಮಾತನಾಡುತ್ತಾ ಅಬ್ದುಲ್ ಕಲಾಂರು ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬಂದವರಾಗಿದ್ದರೂ ಕುರಾನ್ ಮತ್ತು ಭಗವದ್ಗೀತೆಯನ್ನು ಸಮಾನವಾಗಿ ಪ್ರೀತಿಸಿ ಅದರ ಸಾರವನ್ನು ಅರಿತಂಥಹ ಭಾರತದ ಒಬ್ಬ ಆದರ್ಶಪ್ರಾಯರಾದ ಪ್ರಥಮ ಪ್ರಜೆ.ಅವರು ಕೇವಲ ಸ್ವಪ್ನ ಜೀವಿಯಲ್ಲ, ತಾನು ಕಂಡ ಸ್ವಪ್ನಗಳನ್ನು ಸಾಕಾರಗೊಳಿಸಲು ಜೀವನವನ್ನೆ ದೇಶಕ್ಕೆ ಸಮರ್ಪಿಸಿದ ದೇಶಪ್ರೇಮಿ. ಇಡೀ ಜಗತ್ತಿನಲ್ಲಿ ಭಾರತವನ್ನು ಔನ್ನತ್ಯಕ್ಕೆ ಕೊಂಡೊಯ್ದ ಮಹಾ ಚೇತನ ಎಂದು ಕೊಂಡಾಡಿದರು.
ಕಾಲೇಜಿನ ಆಡಳಿತಾಧಿಕಾರಿ ಶ್ರೀ. ಕೆ ಶಿವಕುಮಾರರು ಮಾತಾಡುತ್ತಾ ಅಬ್ದುಲ್ ಕಲಾಂರ ಆದರ್ಶ ಸರಳ ವ್ಯಕ್ತಿತ್ವ, ನಿಃಸ್ವಾರ್ಥ ಪ್ರೇಮ, ಆತ್ಮವಿಶ್ವಾಸ,ಮುಗ್ಧ ಸ್ವಭಾವ ಮತ್ತು ನಿರಂತರ ಪರಿಶ್ರಮ ಅವರನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡಿದೆ.ಅಂತಹವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸುದೃಢ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ.ಅವರ ಅಗಲುವಿಕೆಯಿಂದ ದೇಶಕ್ಕೆ ಅಪಾರ ನಷ್ಟವಾದದ್ದಲ್ಲದೆ ದು:ಖ ಉಂಟಾಗಿದೆ. ಜಾತಸ್ಯ ಮರಣಂ ಧ್ರುವಂ ಎಂಬಂತೆ ಮರಣ ಎಂಬುದು ಪ್ರಕೃತಿ ನಿಯಮ ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕಲಾಂ ರ ಸರಳ ಜೀವನ ಮತ್ತು ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿಯನ್ನು ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಪ್ರಭಾವತಿ ಅವರು ಮಕ್ಕಳಿಗೆ ತಿಳಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಜ್ಯೋತಿ , ಶ್ರೀಮತಿ ರೇಖಾ, ಕುಮಾರಿ ವೈಶಾಲಿ, ಉಪನ್ಯಾಸಕ ಸತೀಶ್ ರವರು ಕಲಾಂ ರ ಗುಣ, ಆದರ್ಶಗಳನ್ನು ಹೊಗಳಿದರು. ವಿದ್ಯಾರ್ಥಿಗಳಾದ ತಾಜುದ್ದೀನ್, ಅಬ್ದುಲ್ ಮುರ್ಷಿದ್, ಮಾಕ್ಸಿಮ್ ರೋಡ್ರಿಗಸ್, ನಫೀಸತ್ ಮಿಸ್ರಿಯ, ಜ್ಯೋತಿಶ್ರೀ ಮೊದಲಾದವರು ಕಲಾಂರನ್ನು ಗುಣಗಾನ ಮಾಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕ ಸಂಘದ ಕಾರ್ಯದರ್ಶಿ ಅನೀಶ್ ಕುಮಾರ್ ಕಲಾಂ ರ ಆದರ್ಶ, ಸ್ವಪ್ನಗಳನ್ನು ಸಾಕ್ಷಾತ್ಕರಿಸುವುದಾಗಿ ಠರಾವು ಮಂಡಿಸಿದರು. ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಸಭೆ ಕೊನೆಗೊಂಡಿತು.