ಪೆರ್ಲ ನಾಲಂದ ಕಾಲೇಜ್ ಯೂನಿಯನ್ ನೇತೃತ್ವದಲ್ಲಿ ನಡೆದ “ಯುವ 2020” ಕಾಲೇಜ್ ಡೇ ಉದ್ಘಾಟಿಸಿ ಗೋಪಾಲ್ ಚೆಟ್ಟಿಯಾರ್
ಭಾರತ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿದ ರಾಷ್ಟ್ರ. ಅದರಲ್ಲೂ ವಿದ್ಯಾರ್ಥಿಗಳು ನಮ್ಮ ರಾಷ್ಟ್ರವನ್ನು ರೂಪಿಸುವ ಶಕ್ತಿಗಳು. ವಿದ್ಯಾರ್ಥಿ ಸಮೂಹ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದಾಗ ರಾಷ್ಟ್ರ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುತ್ತದೆ ಎಂದು ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು.
ಇತರ ಜೀವಿಗಳಿಂದ ವಿಭಿನ್ನನಾದ ಮಾನವ, ಪ್ರಾಣಿಗಳಿಂದಲೂ ಹೆಚ್ಚು ಜ್ಞಾನವನ್ನು ಹೊಂದಿಕೊಂಡು ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ಏನು ಮಾಡಿದ್ದಾನೆ ಅನ್ನುವುದನ್ನು ಅಲೋಚಿಬೇಕಿದೆ. ನಮ್ಮ ಮನೆ, ಸಮಾಜ, ಕಾರ್ಯಕ್ಷೇತ್ರದಲ್ಲಿ ನಾವೇನು ಮಾಡಿದ್ದೇವೆ ಎನ್ನುವುದು ಚಿಂತಿಸಿದಾಗ ಇನ್ನು ಮುಂದೆ ನಾವೇನು ಮಾಡಬೇಕಿದೆ ಎಂಬುದನ್ನು ತಿಳಿಯಲು ಸಾಧ್ಯ.
ನಾನು ನನ್ನದು ಎನ್ನುವುದನ್ನು ಮಾತ್ರ ಅಲೋಚಿಸದೇ ಸಮಾಜಕ್ಕೋಸ್ಕರ ಅಮೂಲ್ಯದ ಸಮಯವನ್ನು ಮೀಸಲಿಡಬೇಕು. ಸಾಮಾಜದ ಏಳಿಗೆಗೆ ಪ್ರತಿಯೊಬ್ಬನೂ ಶ್ರಮಿಸಬೇಕಿದೆ.
ಪ್ರತಿಯೊಬ್ಬನೂ ತನ್ನ ಜೀವನವನ್ನು ರೂಪಿಸಬೇಕಾದ ಅಮೂಲ್ಯವಾದ ಸಮಯ ಕಾಲೇಜು ಜೀವನ. ಆದುದರಿಂದ ದಾರಿ ತಪ್ಪದೇ ಸರಿ ದಾರಿಯಲ್ಲಿ ನಡೆದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗಿಲ್ಲ ಎಂದರು.
ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು. ಕಾಲೇಜ್ ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ. ಸ್ವಾಗತಿಸಿ ಕಾರ್ಯದರ್ಶಿ ಸುದೀಶ್ ವಂದಿಸಿದರು. ನಿಶಾ ನಿರೂಪಿಸಿದರು.