ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ನಬಾರ್ಡ್ನ ಜಂಟಿ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಜ್ಯೋತಿಶ್ ಜಗನ್ನಾಥ್
ವಿಶ್ವದಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ವಿಶ್ವದ ಏಕೈಕ ದೇಶ ನಮ್ಮದಾಗಿದ್ದು, ಯುವಕರು ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಿದಲ್ಲಿ, ಖಂಡಿತವಾಗಿಯೂ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗುತ್ತದೆ. ಆದುದರಿಂದ ಯುವ ಸಮೂಹ ಭ್ರಷ್ಟಾಚಾರ ಬಹಿಷ್ಕರಿಸುವ ಸಂಕಲ್ಪ ತೊಡಬೇಕು ಎಂದು ನಬಾರ್ಡ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜ್ಯೋತಿಶ್ ಜಗನ್ನಾಥ್ ಹೇಳಿದರು.
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ನಬಾರ್ಡ್ ನ ಜಂಟಿ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಭೋಧಿಸಿ ಅವರು ಮಾತನಾಡಿದರು.
ಸರ್ಕಾರಿ ಕೆಲಸ ಮಾಡಲು ಹಿಂದೇಟು ಹಾಕುವವರ ವಿರುದ್ಧ, ಲಂಚದ ಬೇಡಿಕೆಯಿಡುವವರ ವಿರುದ್ಧ, ಅಕ್ರಮ ಸಂಪತ್ತು ಹೊಂದಿರುವವರ ವಿರುದ್ಧ ದೂರು ಸಲ್ಲಿಸಬೇಕು.
ಲಂಚ ಪಡೆದುಕೊಳ್ಳುವುದು, ಲಂಚ ನೀಡುವುದು ಕಾನೂನು ಪ್ರಕಾರ ಅಪರಾಧ. ಇದರಲ್ಲಿ ಭಾಗಿಯಾದವರಿಗೆ ಜೈಲು ಶಿಕ್ಷೆಯಾಗುತ್ತದೆ ಹಾಗೂ ಕೆಲಸದಿಂದ ವಜಾಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಆಗಬೇಕಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ, ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗು ಭಾರತದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕಾಗಿ ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಅತ್ಯಗತ್ಯ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ಸ್ವಾಗತಿಸಿದರು. ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಶ್ರೀನಿಧಿ ವಂದಿಸಿದರು.