ವಿದ್ಯಾರ್ಥಿಗಳು ತಮ್ಮ ಕನಸ್ಸನ್ನು ನನಸಾಗಿಸಲು ಪ್ರಯತ್ನಿಸುವಾಗ ಹಲವಾರು ಸವಾಲುಗಳನ್ನು ಎದುರಿಸಬೇಕಾದೀತು, ಅವುಗಳನ್ನೆಲ್ಲ ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಎದುರಿಸಿ, ಕನಸ್ಸನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಕಣ್ಣೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ಕಾಸರಗೋಡು ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ವಿಜಯನ್ ಕೆ. ಹೇಳಿದರು.
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಗುರುವಾರ ಜರಗಿದ ಧತ್ತಿ ನಿಧಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನಸು ಕಾಣಲು ಸಿದ್ಧರಾಗಿ ಇರದಿದ್ದಲ್ಲಿ ಅವನ ವೈಯಕ್ತಿಕ ಅಭಿವೃದ್ಧಿ ಹಾಗೂ ರಾಷ್ಟ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಕನಸ್ಸುಗಳನ್ನು ನನಸಾಗಿಸಲು ವಿದ್ಯಾರ್ಥಿಗಳು ಆಶಾವಾದಿಗಳಾಗಬೇಕು. ಕನಸು ಕಾಣುವುದು, ಕಂಡ ಕನಸ್ಸನ್ನು ನನಸಾಗಿಸುವುದು ವಿದ್ಯಾರ್ಥಿಗಳ ಕರ್ತವ್ಯ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಬೇಕೆಂದಿದ್ದಲ್ಲಿ ಅದಕ್ಕೆ ಸುಲಭೋಪಾಯಗಳಿಲ್ಲ, ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಪರಿಶ್ರಮವೊಂದೇ ಉಪಾಯ ಎಂದು ಪ್ರೊ| ವಿಜಯನ್ ಹೇಳಿದರು.
ನಾವು ಈಗ ಅನುಭವಿಸುತ್ತಿರುವ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ. ಜೀವನದಲ್ಲಿ ಯಶಸ್ಸು ಕಂಡ ಮಹಾಪುರುಷರೆಲ್ಲ ಬಡತನದ ಹಿನ್ನೆಲೆಯಿಂದಲೇ ಬಂದಿದ್ದಾರೆ. ಆದುದರಿಂದ ಕನಸು ನನಸಾಗಲು ಬಡತನ ಎಂದಿಗೂ ಸವಾಲಲ್ಲ. ನಮ್ಮಲ್ಲಿ ಹಲವಾರು ಪ್ರತಿಭೆಗಳು ಅಡಕವಾಗಿದ್ದು, ಅವುಗಳು ಹೊರಹೊಮ್ಮಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಅವರು ಹೇಳಿದರು.
ಕಾಸರಗೋಡು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಣ ತೊಡಬೇಕು. ವಿದ್ಯೆ ಎಲ್ಲಾ ಸಂಪತ್ತು ಗಳಿಂದ ಶ್ರೇಷ್ಠವಾದ ಸಂಪತ್ತು. ನಮ್ಮಲ್ಲಿರುವ ವಿದ್ಯಾ ಸಂಪತ್ತನ್ನು ಯಾರಿಂದಲೂ ಅಪಹರಿಸಲು ಸಾಧ್ಯವಿಲ್ಲ. ಆದುದರಿಂದ ವಿದ್ಯಾ ದಾನ ಶ್ರೇಷ್ಠ ದಾನ, ಅದನ್ನು ಪಡೆದುಕೊಂಡು ಭವಿಷ್ಯದಲ್ಲಿ ಸತ್ ಪ್ರಜೆಯಾಗಿ ಬಾಳಬೇಕು ಎಂದರು. ಜನ್ಮ ಕೊಟ್ಟ ತಂದೆ ತಾಯಿ, ನಾವು ಹುಟ್ಟಿದ ದೇಶ, ನಮಗೆ ವಿದ್ಯೆ ನೀಡಿದ ವಿದ್ಯಾ ಸಂಸ್ಥೆಗಳನ್ನು ಎಂದೆಂದಿಗೂ ಮರೆಯಬಾರದು, ಸ್ವರ್ಗಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ಧತ್ತಿ ನಿಧಿ ಬಹುಮಾನ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸಬೇಕು ಎಂದರು.
ಪ್ರೊ| ವಿಜಯನ್ ಕೆ., ಶಂಕರನಾರಾಯಣ ಮಯ್ಯ ಮತ್ತಿತರರು, ಪರೀಕ್ಷೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ, ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧತ್ತಿನಿಧಿ ಬಹುಮಾನ ವಿತರಿಸಿದರು.
ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧತ್ತಿನಿಧಿಗಳನ್ನು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶಂ.ನಾ. ಖಂಡಿಗೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾಲೇಜು ಆಡಳಿತ ಮಂಡಳಿಯ ಖಜಾಂಜಿ ಗೋಪಾಲ ಚೆಟ್ಟಿಯಾರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರಾಜಶೇಖರ್ ಪೆರ್ಲ ವಂದಿಸಿದರು. ಉಪನ್ಯಾಸಕಿ ಸವಿತಾ ಡಿ ನಿರೂಪಿಸಿದರು.