ವಿಷಯಗಳನ್ನು ಸರಿಯಾಗಿ ಮನನ ಮಾಡಿ ಅರ್ಥೆಸಿ ಓದಿದಲ್ಲಿ ಪರೀಕ್ಷೆಯಲ್ಲಿ ಎದುರಾಗುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಬರೆಯಲು ಸಾಧ್ಯ ಎಂದು ಮನಶಾಸ್ತ್ರಜ್ಞ, ಪುನರ್ನವ ಟ್ರಸ್ಟ್ ನ ಟ್ರಸ್ಟಿ ನವೀನ್ ಎಲ್ಲಂಗಳ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ನಡೆದ ’ಸ್ಟಡಿ ಸ್ಕಿಲ್ಸ್ ಹಾಗೂ ಗೋಲ್ ಸೆಟ್ಟಿಂಗ್’ ತರಬೇತಿ ನೀಡಿ ಮಾತನಾಡಿದರು.
ಪರೀಕ್ಷಾ ಸಮಯದಲ್ಲಿ ಮಾತ್ರ ಸಿದ್ಧತೆ ನಡೆಸುವುದು ಸೂಕ್ತವಲ್ಲ.ಶೆಕ್ಷಣಿಕ ವರ್ಷದ ಪ್ರಾರಂಭದಲ್ಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ವಿಷಯ ಮನದಟ್ಟಾಗಿ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಗಳು ಬಂದರೂ ಸಮರ್ಪಕ ಉತ್ತರ ಬರೆಯಲು ಸಾಧ್ಯವಾಗುವುದು. ಮನುಷ್ಯನ ಗುರಿ ಸಾಧನೆಗೆ ಆತ್ಮ ವಿಶ್ವಾಸ ಬಹು ಮುಖ್ಯ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳನ್ನು ಎದುರಿಸಿದರೆ ಸಾಲದು. ಜೀವನದಲ್ಲಿ ಸಾಧಿಸುವ ಛಲ, ಆತ್ಮ ವಿಶ್ವಾಸ ಹೊಂದಿರಬೇಕು. ವಿಷಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗುರಿ ಸಾಧನೆಯತ್ತ ನಿರಂತರ ಶ್ರಮ ವಹಿಸಬೇಕು. ಅಧ್ಯಯನ ಸೂತ್ರಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು. ಕಲಿಕೆಗೆ ವಿಷಯ ಮನನದ ಜತೆಗೆ ಸ್ಮರಣೆ ಬಹುಮುಖ್ಯ.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ತರಬೇತಿಗಳ ಸದ್ಬಳಕೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಅವರೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಗುವುದು. ಸಂಘ ಸಂಸ್ಥೆಗಳು ಇದನ್ನು ಮನಗಾಣಬೇಕು. ವಿದ್ಯೆ ಗಳಿಕೆಗೆ ಅಡ್ಡದಾರಿಗಳಿಲ್ಲ. ಶ್ರದ್ಧೆ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯೆ ಶ್ಯಾಮಲಾ ಪತ್ತಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಸಹ ಪ್ರಾಂಶುಪಾಲ ಕೇಶವ ಶರ್ಮ ಅಧ್ಯಕ್ಷತೆ ವಹಿಸಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ನವೀನ್ ಎಲ್ಲಂಗಳ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಅಭಿಲಾಶ್, ಅಜಿತ್, ಕಾವ್ಯ, ಅಂಜನ ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ಚೈತ್ರ ವಂದಿಸಿದರು. ದೀಕ್ಷ ನಿರೂಪಿಸಿದರು.