×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ವ್ಯಾಸನಗಳಿಗೆ ಬಲಿಯಾಗುವ ಮುನ್ನ ಹೆತ್ತವರನ್ನು ನೆನಪಿಸಿ’

ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಕಾಸರಗೋಡು ಬಿ.ಸಿ.ಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲೆ ಮತ್ತು ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಹಾಗೂ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

Drug-Awarness

Drug-Awarness1

Drug-Awarness2

Drug-Awarness3

ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ.

ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರದಿಂದಿದ್ದು ದೇಶದ ಸತ್ಪ್ರಜೆಗಳಾಗಿ ಬದುಕು ನಡೆಸಬೇಕು.ಮಾದಕ ವಸ್ತುಗಳ ಮೋಡಿಗೆ ಯುವ ಜನರು ಬಲಿಯಾಗದಂತೆ ಎಚ್ಚರ ವಹಿಸಲು ಜಾಗೃತಿ ಕಾರ್‍ಯಕ್ರಮಗಳನ್ನು ರೂಪಿಸಬೇಕು. ದುಶ್ಚಟಗಳನ್ನು ತ್ಯಜಿಸುವಂತೆ ಜನಜಾಗೃತಿ ಮೂಡಿಸಲು ಮುಂದಾಗಬೇಕು. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೈ ಜೋಡಿಸಲು ಕಂಕಣಬದ್ಧರಾಗಬೇಕು ಎಂದರು.

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಅಧ್ಯಕ್ಷ ಅಶ್ವಥ್ ಪೂಜಾರಿ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು.

ಜನಜಾಗೃತಿ ವೇದಿಕೆ ಸದಸ್ಯ ಶರೀಫ್ ಕೊಡವಂಜಿ ಮಾತನಾಡಿ, ಭಾರತವು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬಹಳಷ್ಟು ಮುಂದುವರಿಯುತ್ತಿದೆ. ವಿದ್ಯಾರ್ಥಿಗಳು ದೇಶದ ಬಲುದೊಡ್ಡ ಶಕ್ತಿ.ದೇಶವನ್ನು ಇನ್ನಷ್ಟು ಬಲಿಷ್ಟಗೊಳಿಸಲು ವಿದ್ಯಾರ್ಥಿಗಳಿಂದ ಸಾಧ್ಯ. ಹೆತ್ತವರು, ಶಿಕ್ಷಕರು ಮಾತ್ರವಲ್ಲದೆ ಸಮಾಜ ಹಾಗೂ ದೇಶ ವಿದ್ಯಾರ್ಥಿಗಳಲ್ಲಿ ನಿರೀಕ್ಷೆ ಹಾಗೂ ಭರವಸೆ ಇರಿಸಿದೆ.ಯುವಕರು ದೇಶವನ್ನು ಮುನ್ನಡೆಸುವ ಶಕ್ತಿಗಳಾಗಿದ್ದಾರೆ.

ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯ ಯಾವುದೇ ಪ್ರವಚನಕಾರರಿಗೂ ಇಲ್ಲ. ವ್ಯಕ್ತಿಯ ಆಲೋಚನೆಗಳನ್ನು ಬದಲಾಯಿಸುವ ಅಮಾನುಷ ಶಕ್ತಿ ಆತನ ಮೆದುಳಿಗಿದೆ.ಮಾದಕ ವಸ್ತು ಬಳಕೆಯಿಂದ ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣ ಕುಗ್ಗುತ್ತದೆ. ನಿರಂತರ ಮಾದಕ ವಸ್ತುಗಳ ಸೇವನೆ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುತ್ತದೆ.

ಮದ್ಯ, ಮಾದಕ ಪೇಯಗಳಿಗೆ ವಿಧಿಸಿರುವ ಗರಿಷ್ಟ ತೆರಿಗೆಗಳು ಸರಕಾರದ ಖಜಾನೆ ತುಂಬಿಸುತ್ತಿದೆ. ಇದೇ ಕಾರಣದಿಂದ ಸರಕಾರವೇ ಮುಚ್ವಿದ ಮದ್ಯ ಮಾರಾಟ ಕೇಂದ್ರಗಳನ್ನು ಪುನಃ ತೆರೆಯುವಂತೆ ಮಾಡಿದೆ.

ಮದ್ಯ ಮಾರಾಟದಿಂದ ಲಭಿಸುವ ತೆರಿಗೆಗಿಂತ ಹೆಚ್ಚಿನ ಮೊತ್ತ ಆರೋಗ್ಯ ವಲಯ, ಕುಟುಂಬ ನ್ಯಾಯಾಲಯಗಳಲ್ಲಿ ಖರ್ಚಾಗುತ್ತಿದೆ ಎಂಬ ಸತ್ಯವನ್ನು ಸರಕಾರ ಅರ್ಥಮಾಡಿಕೊಳ್ಳದಿರುವುದು ವಿಪರ್ಯಾಸ.

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಯುವ ಜನಾಂಗ ಮುಂದಾಗಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುಧ್ಹ ಪ್ರಚಾರಕರಾಗಿ ತಮ್ಮ ತಮ್ಮ ಮನೆಗಳಿಂದಲೇ ದುಶ್ಚಟ ಬಿಡಿಸಲು ಆರಂಭಿಸಬೇಕು ಎಂದರು.

ಕಾಲೇಜು ಸಹ ಪ್ರಾಂಶುಪಾಲ ಕೇಶವ ಶರ್ಮ ಮಾತನಾಡಿ, ಯುವ ಸಮುದಾಯದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಮಾದಕ ವಸ್ತುವನ್ನು ದೂರ ಸರಿಸಿ ಉನ್ನತ ಶಿಕ್ಷಣ ಹಾಗೂ ಸದೃಢ ಭವಿಷ್ಯ ರೂಪಿಸಲು ಒತ್ತು ನೀಡಬೇಕು. ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ನೈಜ ಅರಿವು ಮೂಡಿಸಲು ಸಾಧ್ಯವಾದಲ್ಲಿ ಮಾದಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗುವುದು ಎಂದರು.

ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪ ಅಮೆಕ್ಕಳ ಮಾತನಾಡಿ, ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರಿಗೆ ಅವುಗಳ ದುಷ್ಪರಿಣಾಮಗಳನ್ನು ತಿಳಿಸಿ, ಚಟಗಳಿಂದ ಹಿಂಜರಿಯುವಂತೆ ಮಾಡಿ ಅವರನ್ನು ಉನ್ನತಿಗೇರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವಪೂರ್ಣವಾಗಿರಬೇಕು ಎಂದರು.

ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲಾ ಶಿಕ್ಷಕ ಉಮೇಶ್ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಈಶ್ವರ ಮಾಸ್ಟರ್ ಮಂಜೇಶ್ವರ, ಬಾಲಕೃಷ್ಣ ರೈ ಮುಳ್ಳೇರಿಯಾ, ಹರೀಶ್ ಶೆಟ್ಟಿ ಕಡಂಬಾರು, ದಿನೇಶ್ ಚೆರುಗೋಳಿ, ನಾರಾಯಣ ಮಾಟೆ, ಕಾರಡ್ಕ ಉಪಸ್ಥಿತರಿದ್ದರು. ಮಾದಕ ವ್ಯಸನದ ಜಾಗೃತಿ ಮೂಡಿಸುವ ಕಿರು ಚಿತ್ರ ಪ್ರದರ್ಶನ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ ಎಂ. ಸ್ವಾಗತಿಸಿದರು. ಜನ ಜಾಗೃತಿ ಪೆರ್ಲ ವಲಯಾಧ್ಯಕ್ಷ ಬಿ.ಪಿ. ಶೇಣಿ ವಂದಿಸಿದರು. ವಲಯ ಮೇಲ್ವಿಚಾರಕಿ ವಿನುತಾ ನಿರೂಪಿಸಿದರು.